ಸನಾ: ಅಮೆರಿಕಾ ಯೆಮೆನ್ ಮೇಲೆ ಡ್ರೋಣ್ ದಾಳಿ ನಡೆಸಿದ್ದು, ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದ 7 ಉಗ್ರರು ಸಾವನ್ನಪ್ಪಿದ್ದಾರೆ.
ಯೆಮೆನ್ ನ ಈಶಾನ್ಯ ಪ್ರಾಂತ್ಯ ಮರೀಬ್ ನಲ್ಲಿ ಈ ದಾಳಿ ನಡೆದಿದ್ದು, ಅಲ್ ಖೈದಾ ಉಗ್ರ ಸಂಘಟನೆಗೆ ಇಬ್ಬರು ನಾಯಕರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಎರಡು ಪ್ರತ್ಯೇಕ ದಾಳಿಗಳಲ್ಲಿ ಅಮೆರಿಕ ಒಟ್ಟು 7 ಉಗ್ರರನ್ನು ಹತ್ಯೆ ಮಾಡಿದೆ ಎಂದು ಯೆಮೆನ್ ನ ಭದ್ರತಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮೆರಿಕಾ ಯೆಮೆನ್ ನಲ್ಲಿರುವ ಅಲ್ ಖೈದಾ ಉಗ್ರರನ್ನು ಗುರಿಯಾಗಿರಿಸಿಕೊಂಡು ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಇದು ಇತ್ತೀಚಿನ ದಾಳಿಯಾಗಿದೆ. ಏ.5 ರಂದೂ ಸಹ ಇದೇ ಮಾದರಿಯ ದಾಳಿಯನ್ನು ನಡೆಸಿದ್ದ ಅಮೆರಿಕಾ ಅಲ್ ಖೈದಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಿತ್ತು.