ಬಿಎಸ್ಎಫ್ ಯೋಧ ತೇಜ್ ಬಹದ್ದೂರ್
ರೆವಾರಿ: ನ್ಯಾಯ ದೊರಕುವ ವಿಶ್ವಾಸವಿದ್ದು, ನನ್ನ ಹೋರಾಟ ಯೋಧರ ಪರವಾಗಿದೆ ಎಂದು ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಅವರು ಗುರುವಾರ ಹೇಳಿದ್ದಾರೆ.
ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆಂದು ಆರೋಪಿಸಿದ್ದ ತೇಜ್ ಬಹದ್ದೂರ್ ಅವರು ಸಾಕಷ್ಟು ಸುದ್ದಿ ಗ್ರಾಸವಾಗಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಯೋಧ ತೇಜ್ ಬಹದ್ದೂರ್ ಅವರು ಕಾಣೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ತೇಜ್ ಬಹದ್ದೂರ್ ಅವರು ಸುರಕ್ಷಿತರಾಗಿದ್ದಾರೆಂದು ಸೇನಾಧಿಕಾರಿಗಳು ಹೇಳಿದ್ದರು.
ನಿನ್ನೆಯಷ್ಟೇ ಸೇನಾಧಿಕಾರಿಗಳು ತೇಜ್ ಬಹದ್ದೂರ್ ಅವರನ್ನು ಸೇವೆಯಿಂದ ವಜಾ ಮಾಡಿದ್ದರು. ಸೇನಾ ವಿಚಾರಣೆ ವೇಳೆ ಬಹದ್ದೂರ್ ಸುಳ್ಳು ಆರೋಪ ಮಾಡಿದ್ದಾರೆಂಬುದು ಸಾಬೀತಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.
ಸೇನಾಧಿಕಾರಿಗಳ ಕ್ರಮದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತೇಜ್ ಬಹದ್ದೂರ್ ಯಾದವ್ ಅವರು, ಆಹಾರದ ಕುರಿತಂತೆ ನಾನು ಸಾಕ್ಷ್ಯಾಧಾರಗಳನನು ನೀಡಿದ್ದರೆ. ಆದರೂ ನನಗೆ ನ್ಯಾಯ ದೊರೆಯಲಿಲ್ಲ. ಸೇನಾಧಿಕಾರಿಗಳ ಕ್ರಮದ ವಿರುದ್ಧ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯ ದೊರಕುವ ವಿಶ್ವಾಸ ನನಗಿದೆ. ನನ್ನ ಕೊನೆಯುಸಿರುರಿರುವವರೆಗೂ ಯೋಧರಿಗಾಗಿ ಹೋರಾಡುತ್ತೇನೆ. ಬಹಳ ಹಿಂದೆಯೇ ದೂರು ಬಂದಿತ್ತು. ಆದರೆ, ಈ ಬಗ್ಗೆ ಯಾರು ಮುಂದೆ ಬಂದಿರಲಿಲ್ಲ. ಸರ್ಕಾರದ ಗಮನಕ್ಕೆ ತರುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಯೋಧರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತುವುದು ಅಗತ್ಯವಿತ್ತು. ಅದರೆ, ಮುಂದಿನ ಪೀಳಿಗೆ ಸೇನೆಯಲ್ಲಿ ನಾವು ಎದುರಿಸದಂತಹ ಪರಿಸ್ಥಿತಿಯನ್ನು ಎದುರಿಸಬಾರದು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ನನ್ನನ್ನು ಕೂಡಿಹಾಕಿದ್ದರು. ಕುಟುಂಬದವರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.