ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಸಲುವಾಗಿ ಗಣ್ಯರ ಕಾರುಗಳ ಮೇಲಿನ ಕೆಂಪು ದೀಪಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಗುರುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೆಂಪು ದೀಪಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ವಿಐಪಿ ಸಂಸ್ಕೃತಿಯನ್ನು ತೊಡೆದುಹಾಕುವುದಕ್ಕೆ ನಾನು ಈ ಹಿಂದಿನಿಂದಲೂ ಬೆಂಬಲ ವ್ಯಕ್ತಪಡಿಸಿದ್ದೆ. ವಿಐಪಿ ಸಂಸ್ಕೃತಿ ಅರ್ಥಹೀನವಾದದ್ದು. ಬ್ರಿಟೀಷರು ಆರಂಭಿಸಿದ ವ್ಯವಸ್ಥೆ ಇದಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ನಿರ್ಧಾರ ಅಗತ್ಯವಿತ್ತು. ಈ ಹಿಂದಿನಿಂದಲೂ ಈ ರೀತಿಯ ನಿರ್ಧಾರ ಬಗ್ಗೆ ಹೇಳುತ್ತಲೇ ಬಂದಿದ್ದೆ. ವಿಶೇಷ ಕೆಂಪು ದೀಪ ನಮಗೆ ಯಾಕೆ ಬೇಕು?...ಅದರಿಂದ ನಿಮಗೆ ಏನು ಸಿಗುತ್ತದೆ...? ಕೆಂಪು ದೀಪ ಅರ್ಥಹೀನವಾದದ್ದು. ಬ್ರಿಟೀಷರು ಈ ಸಂಸ್ಕೃತಿಯನ್ನು ಆರಂಭಿಸಿದ್ದರು. ಕಾಂಗ್ರೆಸ್ಸಿಗರು ಅವರ ವಂಶಸ್ಥರಲ್ಲವೇ...ಹೀಗಾಗಿ ಅವರು ಬ್ರಿಟೀಷರ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿದ್ದರು. ಮುಖ್ಯವಾಗಿ, ವಿದೇಶಿ ಮಹಿಳೆಯೊಬ್ಬರು ದೇಶದ ಪ್ರಧಾನಿಯಾದ ಬಳಿಕವಂತೂ ಅವರಲ್ಲಿ ವಿಶ್ವಾಸ ಮತ್ತಷ್ಟು ಹೆಚ್ಚಾಗಿತ್ತು. ಪ್ರಸ್ತು ಕೇಂದ್ರ ಸರ್ಕಾರ ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ಮತ್ತಷ್ಟು ಸಾಂಕೇತಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.