ದೇಶ

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸರ್ವಿಸ್ ಚಾರ್ಚ್ ಕಡ್ಡಾಯವಲ್ಲ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

Lingaraj Badiger
ನವದೆಹಲಿ: ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪೂರೈಸುವ ಆಹಾರ ಮತ್ತು ತಿಂಡಿ ಬಿಲ್ ಗೆ ಸರ್ವಿಸ್ ಚಾರ್ಚ್(ಸೇವಾ ಶುಲ್ಕ) ಕಡ್ಡಾಯವಲ್ಲ. ಅದು ಸಂಪೂರ್ಣ ಸ್ವಯಂಪ್ರೇರಿತ ಎಂದು ಶುಕ್ರವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತ ಮಾರ್ಗಸೂಚಿಗೆ ಅನುಮತಿ ನೀಡಿದ ಬಳಿಕ ಟ್ವೀಟ್ ಮಾಡಿರುವ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು, ಇನ್ನು ಮುಂದೆ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಸೇವಾ ಶುಲ್ಕ ನಿಗದಿಪಡಿಸುವಂತಿಲ್ಲ. ಅದು ಗ್ರಾಹಕರ ಆಯ್ಕೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಸೇವಾ ಶುಲ್ಕಕ್ಕೆ ಸಂಬಂಧಿಸಿದ ಮಾರ್ಗಸೂಚಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾರ್ಗಸೂಚಿಯ ಪ್ರಕಾರ, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ ಮತ್ತು ಆ ಕಾಲಂ ಅನ್ನು ಖಾಲಿ ಬಿಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಗ್ರಾಹಕ ತನ್ನ ಬಿಲ್ ಪಾವತಿಸುವಾಗ ಅದನ್ನು ಭರ್ತಿ ಮಾಡಬಹುದು ಅಥವಾ ಹಾಗೆಯೇ ಬಿಡಬಹುದಾಗಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಶೇ.5ರಿಂದ ಶೇ.20ರವರೆಗೆ ದುಬಾರಿ ಸೇವಾ ಶುಲ್ಕ ವಿಧಿಸುತ್ತವೆ. ತಮಗೆ ಒದಗಿಸಿದ ಸೇವೆ ತೃಪ್ತಿಕರವಾಗಿಲ್ಲದಿದ್ದರೂ ಸೇವಾ ಶುಲ್ಕ ಪಾವತಿಸಬೇಕಾಗಿದೆ ಎಂದು ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
SCROLL FOR NEXT