ಲಖನೌ: ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರಲ್ಲಿ ಒಬ್ಬರಾದ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ಹೇಳಿಕೆ ನೀಡಿದ್ದು, ಬಾಬ್ರಿ ಮಸೀದಿ ಧ್ವಂಸಕ್ಕೆ ಗುಂಪನ್ನು ಪ್ರಚೋದಿಸಿದ್ದು ಎಲ್ ಕೆ ಅಡ್ವಾಣಿ ಅವರಲ್ಲ ನಾನು ಎಂದು ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಅವರ ಪಾತ್ರವಿಲ್ಲ. ಮಸೀದಿ ಧ್ವಂಸಕ್ಕೆ ನಾನೇ ಪ್ರಚೋದನೆ ನೀಡಿದ್ದು ಎಂದು ವೇದಾಂತಿ ಮಾಧ್ಯಮಗಳೆದುರು ಹೇಳಿಕೆ ನೀಡಿದ್ದಾರೆ. ಮಸೀದಿ ಧ್ವಂಸ ಪ್ರಕರಣದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಇತರ ಯಾವುದೇ ನಾಯಕರ ಪಾತ್ರ ಇರಲಿಲ್ಲ, ವಿಶ್ವಹಿಂದೂ ಪರಿಷತ್ ನ ನಾಯಕರಾಗಿದ್ದ ದಿವಂಗತ ಅಶೋಕ್ ಸಿಂಘಾಲ್, ಗೋರಖನಾಥ್ ದೇವಾಲಯದ ಮಹಾಂತ್ ಅವೈದ್ಯನಾಥ್ ಅವರೊಂದಿಗೆ ವಿಶ್ವಹಿಂದೂ ಪರಿಷತ್ ನ ಕಾರ್ಯಕರ್ತರಿಗೆ ಮಸೀದಿಯನ್ನು ಕೆಡವಲು ಪ್ರಚೋದನೆ ನೀಡಲಾಗಿತ್ತು ಎಂದು ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿಗೆ ನೀಡಿರುವ 13 ನಾಯಕರ ಪಟ್ಟಿಯಲ್ಲಿ ರಾಮ್ ವಿಲಾಸ್ ವೇದಾಂತಿ ಅವರ ಹೆಸರೂ ಇದ್ದು, ವಿಚಾರಣೆ ಎದುರಿಸಬೇಕಿದೆ.