ಪಾಟ್ನಾ: ಬಿಹಾರದ ಸಹರ್ಸ ಬಳಿ ಸಹರ್ಸ-ಪಾಟ್ನಾ ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಸುಮಾರು 3 ಗಂಟೆಗಳ ಕಾಲ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಬೆಳಗ್ಗೆ ಸುಮಾರು 9.30ಕ್ಕೆ ಸಹರ್ಸ ರೈಲು ನಿಲ್ದಾಣದಿಂದ ಪಾಟ್ನಾದತ್ತ ಹೊರಟಿದ್ದ ರೈಲು, ರೈಲ್ವೇ ನಿಲ್ದಾಣ ಬಿಡುತ್ತಿದ್ದಂತೆಯೇ ಹಳಿ ತಪ್ಪಿದೆ. ರೈಲಿನ 2 ಬೋಗಿಗಳು ಹಳಿ ತಪ್ಪಿದ್ದು, ತಾಂತ್ರಿಕ ಕಾರಣದಿಂದಾಗಿ ರೈಲು ಹಳಿ ತಪ್ಪಿದೆ ಎಂದು ಅಧಿಕಾಗಿಳು ಹೇಳುತ್ತಿದ್ದಾರೆ. ಕೂಡಲೇ ಸ್ಥಳದಲ್ಲೇ ಇದ್ದ ರೈಲ್ವೇ ಅಧಿಕಾರಿಗಳು ಘಟನೆಯನ್ನು ಪರಿಶೀಲಿಸುತ್ತಿದ್ದು, ಹಳಿ ಸರಿ ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ರೈಲು ಹಳಿ ತಪ್ಪಿದ ಕಾರಣ ಸಹರ್ಸ-ಮಾನ್ಸಿ, ಸಹರ್ಸ-ಮಾಧೇಪುರ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಿದ್ದು, ರೈಲ್ವೇ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 2 ಬೋಗಿಗಳು ಹಳಿ ತಪ್ಪಿವೆಯಾದರೂ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಅಂತೆಯೇ ಉಳಿದ ಬೇರಾವುದೇ ಕೋಚ್ ಗಳಿಗೂ ಧಕ್ಕೆಯಾಗಿಲ್ಲ ಎಂದು ತಿಳಿಸಿದ್ದಾರೆ.