ದೇಶ

ಜೈಲಿನಲ್ಲಿದ್ದುಕೊಂಡೇ ಎಂಎ ಪದವಿ ಪಡೆದ ಗಲ್ಲು ಶಿಕ್ಷೆಗೆ ಗುರಿಯಾದ ಕೈದಿ!

Srinivasamurthy VN

ನಾಗ್ಪುರ: ಜೈಲಿನಲ್ಲಿದ್ದುಕೊಂಡೇ ಮೂವರು ಕೈದಿಗಳು ಪದವಿ ಪಡೆದ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾದ ಸಂಗತಿ ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ನಡೆದಿದೆ.

ಜೀವಾವಧಿ ಮತ್ತು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮೂವರು ಕೈದಿಗಳು ನಾಗ್ಪುರ ಜೈಲಿನಲ್ಲಿದ್ದುಕೊಂಡೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂಲಗಳ ಪ್ರಕಾರ ಮರಣ ದಂಡನೆಗೆ ಗುರಿಯಾಗಿರುವ ನಾರಾಯಣ ಚೌಧರಿ (35 ವರ್ಷ) 2012ರಲ್ಲಿ ಎಂಎ ಕೋರ್ಸ್‌ಗಾಗಿ ಇಗ್ನೊದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಿಜಯ್ ಮಹಾಕಾಲ್ಕರ್(30 ವರ್ಷ) ಬಿಎ ಮತ್ತು ಶ್ಯಾಮರಾವ್ ವಾಘ್ಮಾರೆ (45 ವರ್ಷ) ಎಂಎ ಸೋಷಿಯಾಲಜಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಎಲ್ಲ ಮೂವರು ಕೈದಿಗಳು ತಮ್ಮ ಪದವಿಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ವಿವಿಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

 ಆದರೆ ಜೈಲಿನ ಶಿಷ್ಟಾಚಾರ ಮತ್ತು ನಿಯಮಗಳಿಂದಾಗಿ ಇದೇ ತಿಂಗಳು ನಡೆದ ಇಗ್ನೊ ಘಟಿಕೋತ್ಸವದಲ್ಲಿ ಭಾಗಿಯಾಗಲು ಈ ಕೈದಿಗಳಿಗೆ ಸಾಧ್ಯವಾಗಿರಲಿಲ್ಲ. ಶೀಘ್ರವೇ ಜೈಲಿನ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನಿಸಲಾಗುವುದು ಎಂದು ನಾಗಪುರದಲ್ಲಿರುವ ಇಗ್ನೊದ ಪ್ರಾದೇಶಿಕ ನಿರ್ದೇಶಕ ಪಿ.ಶಿವಸ್ವರೂಪ್ ಅವರು ತಿಳಿಸಿದರು.

2010 ಜುಲೈ ತಿಂಗಳಿನಿಂದೀಚೆಗೆ ನಾಗ್ಪುರ ಮತ್ತು ಅಮರಾವತಿ ಜೈಲುಗಳಿಂದ ಸುಮಾರು 745 ಕೈದಿಗಳು ವಿವಿಧ ಇಗ್ನೊ ಕೋರ್ಸ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಹುತೇಕ ಕೈದಿಗಳು ಸಮಾಜ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡ ಬಯಸುತ್ತಿದ್ದಾರೆ. ಇತರೆ ವಿದ್ಯಾರ್ಥಿಗಳಿಗೆ ನೀಡುವಂತೆಯೇ ವಿವಿ ಕೈದಿಗಳಿಗೂ ಪಠ್ಯಪುಸ್ತಕಗಳನ್ನು ನೀಡುತ್ತಿದೆ. ಜೈಲಿಗೆ ಪಠ್ಯ ಪುಸ್ತಕಗಳನ್ನು ನೀಡಲಾಗಿತ್ತು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಜೈಲಿನಲ್ಲಿರುವ ಕೈದಿಗಳಿಗಾಗಿ ವಿವಿಧ ಸಂಘಸಂಸ್ಥೆಗಳ ಮೂಲಕ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಬಂಧೀಖಾನೆ ಡಿಐಜಿ ಯೋಗೇಶ್ ದೇಸಾಯಿ ಅವರು ಹೇಳಿದ್ದಾರೆ.

SCROLL FOR NEXT