ಹೈದರಾಬಾದ್: ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಹಣ ಪಡೆದ ಆರೋಪದ ಮೇಲೆ ಹೈದರಾಬಾದ್ ಗ್ರಾಹಕರ ವೇದಿಕೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರು. ದಂಡ ವಿಧಿಸಿದೆ.
ವಿಜಯ್ ಗೋಪಾಲ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಹೈದರಾಬಾದ್ ಗ್ರಾಹಕರ ವೇದಿಕೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ದಂಡ ವಿಧಿಸಿದೆ. ಅಲ್ಲದೆ ದೂರುದಾರರಿಗೆ 1 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ. ಅಂತೆಯೇ ಒಂದು ಬಾಟಲಿಗೆ ಎರಡು ಎಂಆರ್‍ಪಿ ಇರಬಾರದು ಎಂಬುದನ್ನು ಸ್ಪಷ್ಟಪಡಿಸಿರುವ ಗ್ರಾಹಕರ ವೇದಿಕೆ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸದಂತೆ ಐನಾಕ್ಸ್ ಗೆ ಸೂಚಿಸಿದೆ. ಅಲ್ಲದೆ ಗ್ರಾಹಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಥಿಯೇಟರ್ ನಿರ್ವಾಹಕರಿಗೆ ಹೇಳಿದೆ ಎಂದು ತಿಳಿದುಬಂದಿದೆ.
ಈ ವಿಚಾರವನ್ನು ಸ್ವತಃ ವಿಜಯ್ ಗೋಪಾಲ್ ಟ್ವೀಟ್ ಮಾಡಿದ್ದು, ಎಲ್ಲ ಮಾಲ್ ಗಳಲ್ಲೂ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಜೂನ್‍ನಲ್ಲಿ ವಿಜಯ್ ಮಲ್ಟಿಪ್ಲೆಕ್ಸ್ ಗೆ ಭೇಟಿ ನೀಡಿದ್ದ ವಿಜಯ್ ಗೋಪಾಲ್ ಥಿಯೇಟರ್ ಗೆ ನೀರಿನ ಬಾಟಲ್ ತೆಗೆದುಕೊಂಡು ಹೋಗಲು ಯತ್ನಿಸಿದ್ದರಂತೆ. ಆದರೆ ಮಾಲ್ ಸಿಬ್ಬಂದಿ ನೀರಿನ ಬಾಟಲ್ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಲಿಲ್ಲ. ಅನಿವಾರ್ಯವಾಗಿ ವಿಜಯ್ ಗೋಪಾಲ್ ಅಲ್ಲೇ ಮಾರಾಟ ಮಾಡುತ್ತಿದ್ದ ನೀರಿನ ಬಾಟಲಿ ತೆಗೆದುಕೊಂಡಿದ್ದಾರೆ. ಆದರೆ ಈ ಬಾಟಲಿಗೆ ಮಾಲ್ ಸಿಬ್ಬಂದಿ 50 ರು. ಪಡೆದಿದ್ದಾರೆ. ಹೊರಗೆ ಕೇವಲ 20 ರುಗೆ ಸಿಗುವ ನೀರಿನ ಬಾಟಲಿಗೆ ಇಲ್ಲಿ 50 ರು ಪಡೆಯಲಾಗುತ್ತಿದೆ. ಈ ಬಗ್ಗೆ ವಿಜಯ್ ಗೋಪಾಲ್ ಮಾಲ್ ಸಿಬ್ಬಂದಿ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಕೆ ಮಾಡಿದ್ದರು.
ದೂರಿನಲ್ಲಿ ವಿಜಯ್ ಗೋಪಾಲ್ "ನನ್ನ ಸ್ವಂತ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಹಾಗೆ ಒಂದು ನೀರಿನ ಬಾಟಲಿಗೆ ಮಲ್ಟಿಪ್ಲೆಕ್ಸ್ ನೊಳಗೆ 50 ರು. ತೆಗೆದುಕೊಂಡ್ರು. ಇದೇ ಬಾಟಲಿಗೆ ಹೊರಗಡೆ 20 ರು. ಎಂಆರ್ ಪಿ ಇದೆ. ಮಾಲ್ ಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆದು ಜನರನ್ನು ಲೂಟಿ ಮಾಡುತ್ತಿವೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ ಇದೀಗ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರು ದಂಡ ವಿಧಿಸಿದೆ.