ಉತ್ತರಪ್ರದೇಶದ ನೂತನ ಡಿಜಿಪಿ ಸುಲ್ಖಾನ್ ಸಿಂಗ್
ಲಖನೌ: ಗೂಂಡಾಗಿರಿ ಮಾಡಿದವರನ್ನಾರನ್ನೂ ಸುಮ್ಮನೇ ಬಿಡುವುದಿಲ್ಲ. ವಿವಿಐಪಿಗಳೂ ಇಂತ ಕೃತ್ಯದಲ್ಲಿ ತೊಡಗಿದರೆ ಅವರನ್ನೂ ಬಿಡುವುದಿಲ್ಲ ಎಂದು ಉತ್ತರಪ್ರದೇಶದ ನೂತನ ಡಿಜಿಪಿ ಸುಲ್ಖಾನ್ ಸಿಂಗ್ ಅವರು ಎಚ್ಚರಿಸಿದ್ದಾರೆ.
ಶನಿವಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿರುವ ಅವರು, ನಿಷ್ಪಕ್ಷ ಪೊಲೀಸೀಂಗ್ ಗೆ ನನ್ನ ಆದ್ಯತೆ. ಗೂಂಡಾಗಾರ್ದಿ ಹಾಗೂ ಕ್ರಿಮಿನಲ್ ಚಟುವಟಿಕೆಗಳಿನ್ನು ದಯೆ ಇಲ್ಲದೆಯೇ ನಿಭಾಯಿಸುತ್ತೇನೆ. ವಿವಿಐಪಿಗಳನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದು ಗೋರಕ್ಷಕ ಹೆಸರಿನಲ್ಲಿ ಮಧ್ಯೆ ಪ್ರವೇಶ ಮಾಡುವುದನ್ನು ಸಹಿಸುವುದಿಲ್ಲ. ಯಾರಾದರೂ ಈ ರೀತಿಯ ಮಾಡಿದ್ದೇ ಆದರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇಂತರ ಘಟನೆಗಳು ನಡೆದಿದ್ದೇ ಆದರೆ, ಸಾರ್ವಜನಿಕರು ನಮಗೆ ಮಾಹಿತಿಯನ್ನು ನೀಡಬೇಕು. ಮಾಹಿತಿ ನೀಡುವ ಜನರ ಹೆಸರು, ವಿಳಾಸವನ್ನು ನಾವು ಕೇಳುವುದಿಲ್ಲ. ಅವರ ಮಾಹಿತಿಯನ್ನೂ ಬಹಿರಂಗ ಪಡಿಸುವುದಿಲ್ಲ ಸಮಾಜಕ್ಕೆ ಕೆಟ್ಟದಾಗುವ ನಡವಳಿಕೆಗಳನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಆ್ಯಂಟಿ ರೋಮಿಯೋ ಕಾರ್ಯಾಚರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇದು ಕೇವಲ ದಾಳಿಯಲ್ಲ. ಪೊಲೀಸರು ಈ ಕೆಲಸವನ್ನು ಪ್ರತೀನಿತ್ಯ ನಡೆಸುತ್ತಿರುತ್ತಾರೆ. ಎಸ್ ಪಿಗಳ ನಿರ್ದೇಶನದಂತೆಯೇ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕರ ಶಾಂತಿಕೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ವಿಚಾರಣೆ ಹಾಗೂ ತನಿಖೆ ನಡೆಸುವ ಪ್ರಕ್ರಿಯೆಗಳು ಇದರಲ್ಲಿರುವುದಿಲ್ಲ. ಆರೋಪಿಗಳ ವಿರುದ್ಧ ಹೇಗೆ ಕ್ರಮಕೈಗೊಳ್ಳಬೇಕೆಂಬುದನ್ನು ನೇರವಾಗಿ ಸಿಬ್ಬಂದಿಗಳಿಗೆ ತಿಳಿಸಲಾಗಿರುತ್ತದೆ. ಭದ್ರತೆ ವಿಚಾರದಲ್ಲಿ ರಾಜಿಯಾಗಿರುವ ಮಾತಿಲ್ಲ. ತಪ್ಪು ಯಾರೇ ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.
ಪೊಲೀಸರು ಪಕ್ಷಪಾತವಿಲ್ಲ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಹೀಗಾಗಿ ಆಡಳಿತಾರೂಢ ಪಕ್ಷವೇ ಆಗಲೀ ಯಾರೇ ಆದರು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಗೂಂಡಾಗಿರಿ ಮಾಡುವುದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಾನೂನಿಡ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಉಗ್ರರ ಶಂಕಿತ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಆಂತರಿಕವಾಗಿ ಈ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಗುಪ್ತಚರ ಇಲಾಖೆ, ಎಸ್'ಟಿಎಫ್, ಎಟಿಎಸ್ ಯಾವಾಗಲೂ ಕಾರ್ಯಪ್ರವೃತ್ತರಾಗಿರಲಿದ್ದಾರೆಂದು ಹೇಳಿದ್ದಾರೆ.