ಚೆನ್ನೈ: ಕೇಂದ್ರ ಸರ್ಕಾರ ಹಿಂದಿಯೇತರ ನಿವಾಸಿಗಳಿಗೆ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ಖಜಾಂಚಿ ಎಂ.ಕೆ.ಸ್ಟಾಲಿನ್ ಅವರ ಆರೋಪವನ್ನು ನಿರಾಕರಿಸಿದ ಕೇಂದ್ರ ಮಾಹಿತಿ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು, ಯಾರೊಬ್ಬರ ಮೇಲೆಯೂ ಹಿಂದಿ ಭಾಷೆಯನ್ನು ಹೇರುತ್ತಿಲ್ಲ. ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಪ್ರಧಾನಿಗಳಾದ ದಿವಂಗತ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕಾಲದಲ್ಲಿ ಜಾರಿಗೆ ತರಲಾದ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ. ನಮ್ಮ ಸರ್ಕಾರ ಯಾವುದೇ ಹೊಸ ಆದೇಶ ಹೇರಿಲ್ಲ. ಹಿಂದಿ ಭಾಷೆಯೇ ಮಾತನಾಡಬೇಕೆಂದು ಯಾರೊಬ್ಬರ ಮೇಲೆಯೂ ಒತ್ತಡ ಹೇರುತ್ತಿಲ್ಲ. ಹಿಂದಿ ಕಲಿತರೆ ಒಳ್ಳೆಯದೇ. ನಾನು ಕೂಡ ರಾಜಕೀಯಕ್ಕೆ ಬಂದ ನಂತರ ಹಿಂದಿ ಭಾಷೆ ಕಲಿತದ್ದು. ಇಂದು ದೇಶದ ಯಾವುದೇ ಭಾಗಕ್ಕೆ ಹೋದರೂ ಹಿಂದಿಯಲ್ಲಿ ಮಾತನಾಡಬಲ್ಲೆ. ನಮ್ಮ ಭವಿಷ್ಯದ ದೃಷ್ಟಿಯಿಂದ ಹಿಂದಿ ಕಲಿತರೆ ಉತ್ತಮ. ಹಾಗೆಂದು ನಾವು ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ರಾಜೀವ್ ಗಾಂಧಿ, ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ವಿಷಯಗಳನ್ನೇ ಇಂದು ಕೂಡ ಜಾರಿಗೆ ತರಲಾಗುತ್ತಿದೆ. ಈ ವಿಷಯದ ಕುರಿತು ಅನಗತ್ಯ ರಾಜಕೀಯ ಮಾಡಿ ಸ್ಥಳೀಯ ಭಾವನೆ ಮೂಡಿಸಲಾಗುತ್ತಿದೆ. ನಾವಿದನ್ನು ಸಾಕಷ್ಟು ನೋಡಿದ್ದೇವೆ ಎಂದರು.
ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಂ.ಕೆ.ಸ್ಟಾಲಿನ್ ಅವರು ವಿಡಿಯೋವನ್ನು ಪೋಸ್ಟ್ ಮಾಡಿ, ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಏಕತೆಯನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.