ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿಯ ಹಿನ್ನೆಲೆಯಲ್ಲಿ ಹಲವು ಒಪ್ಪಂದಗಳ ಬಗ್ಗೆ ನಿರೀಕ್ಷೆ ಮೂಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಉಭಯ ರಾಷ್ಟ್ರಗಳ ನಡುವೆ ಮಹತ್ವದ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೆ.
ನರೇಂದ್ರ ಮೋದಿ ಅವರ ಭೇಟಿಯ ವೇಳೆ ತನ್ನ ಡಿಪ್ಲೊಮಾ ಕೋರ್ಸ್ ಗಳನ್ನು ಭಾರತ ಸರ್ಕಾರ ಮಾನ್ಯ ಮಾಡಬೇಕೆಂದು ಇಸ್ರೇಲ್ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಭಾರತದ ಮಾನವ ಸಂಪನ್ಮೂಲ ಇಲಾಖೆ(ಹೆಚ್ಆರ್ ಡಿ) ಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಚರ್ಚಿಸಬಹುದಾದಂತಹ ಶೈಕ್ಷಣಿಕ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೇವಲ ರಕ್ಷಣಾ ಕ್ಷೇತ್ರ ಮಾತ್ರವಲ್ಲದೇ, ಇಸ್ರೇಲ್ ಮಾನ ಸಂಪನ್ಮೂಲ ಕ್ಷೇತ್ರದಲ್ಲೂ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದು, ತನ್ನ ರಾಷ್ಟ್ರದ ಡಿಪ್ಲೊಮಾ ಕೋರ್ಸ್ ಗಳ ಮಾನ್ಯತೆ ವಿಷಯ ದ್ವಿಪಕ್ಷೀಯ ಸಂಬಂಧದ ವೇಳೆ ಚರ್ಚೆಗೆ ಬರಲಿದೆ ಎಂದು ಭಾರತದಲ್ಲಿರುವ ಇಸ್ರೇಲ್ ನ ರಾಯಭಾರಿ ಅಧಿಕಾರಿ ಹೇಳಿದ್ದಾರೆ.