ನವದೆಹಲಿ: ಅಧಿಕ ಬೇಡಿಕೆಯಿರುವ ಮಾರ್ಗಗಳಲ್ಲಿ ಇಡೀ ರಾತ್ರಿಯ ಪ್ರಯಾಣಕ್ಕೆ ವಿಶೇಷ ಡಬಲ್ ಡೆಕ್ಕರ್, ಹವಾನಿಯಂತ್ರಿತ ರೈಲು ಸೇವೆಯನ್ನು ಮುಂದಿನ ಜುಲೈ ತಿಂಗಳಿನಿಂದ ಆರಂಭಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಉತ್ಕೃಷ್ಟ್ ಡಬಲ್ ಡೆಕ್ಕರ್ ಎಸಿ ಯಾತ್ರಿ ಎಕ್ಸ್ ಪ್ರೆಸ್ ಅಥವಾ ಉದಯ್ ಎಕ್ಸ್ ಪ್ರೆಸ್ ಎಂದು ಹೆಸರಿರುವ ರೈಲಿನಲ್ಲಿ ಸ್ಲೀಪರ್ ಬರ್ತ್ ಇರುವುದಿಲ್ಲ. ಆರಾಮದಾಯಕ ಒರಗಿಕೊಳ್ಳುವ ಕುರ್ಚಿಗಳಿರುತ್ತವೆ.ರೈಲಿನಲ್ಲಿರುವ ಪ್ರತಿ ಬೋಗಿಗಳಲ್ಲಿ 120 ಮಂದಿ ಕುಳಿತುಕೊಳ್ಳುವ ಆಸನಗಳಿದ್ದು ಪ್ರಯಾಣಿಕರಿಗೆ ಬಿಸಿ ಬಿಸಿ ಆಹಾರ ಮತ್ತು ಪಾನೀಯ ಮಾರಾಟ ಯಂತ್ರಗಳಿರುತ್ತವೆ.
ದೆಹಲಿ-ಲಕ್ನೋದಂತಹ ಮಾರ್ಗಗಳಲ್ಲಿ ಸಂಚರಿಸಲಿದ್ದು 3ಎಸಿ ದರ್ಜೆಯ ಬೋಗಿಗಳಿಗಿಂತ ಕಡಿಮೆ ಟಿಕೆಟ್ ಬೆಲೆಯನ್ನು ಹೊಂದಿರುತ್ತದೆ ಮತ್ತು ಹೆಚ್ಚು ಮೂಲಭೂತ ಸೌಕರ್ಯಗಳಿರುತ್ತವೆ.
ಪ್ರತಿ ಬೋಗಿಗಳಲ್ಲಿ ದೊಡ್ಡ ಎಲ್ ಸಿಡಿ ಟಿವಿ ಪರದೆ, ವೈ ಫೈ ಸಂಪರ್ಕದ ಹೆಡ್ ಫೋನ್ ಗಳಿಂದ ಪ್ರಯಾಣಿಕರಿಗೆ ಟಿವಿಯ ಧ್ವನಿ ಕೇಳುವ ಸೌಲಭ್ಯಗಳಿರುತ್ತದೆ. ರಾತ್ರಿ ಹಗಲು ಸಂಚರಿಸುವ ರೈಲಿನಲ್ಲಿ ಸ್ಲೀಪರ್ ಬರ್ತ್ ಇಲ್ಲದಿದ್ದರೂ ಕೂಡ ಪ್ರಯಾಣಿಕರಿಗೆ ಪ್ರಯಾಣ ಸುಲಭವಾಗುವ ರೀತಿಯಲ್ಲಿ ಕೆಲವು ಸೌಕರ್ಯಗಳನ್ನು ಒದಗಿಸಲಾಗಿದೆ.
ಸೀಟುಗಳಲ್ಲಿ ಕಾಲಿಡಲು ಸಾಕಷ್ಟು ಜಾಗಗಳು, ಆಧುನಿಕ ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಎಲ್ಲಾ ಬೋಗಿಗಳಲ್ಲಿ ಬಯೋ ಶೌಚಾಲಯಗಳಿವೆ. ಈ ರೈಲು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ.