ದೇಶ

ಪಳನಿಸ್ವಾಮಿ ಭರವಸೆಗೆ ಮಣಿದ ತಮಿಳುನಾಡು ರೈತರು: 1 ತಿಂಗಳ ಮಟ್ಟಿಗೆ ಪ್ರತಿಭಟನೆ ಸ್ಥಗಿತ

Manjula VN
ನವದೆಹಲಿ: ಬರ ಪರಿಹಾರಕ್ಕೆ ಆಗ್ರಹಿಸಿ ಕಳೆದ 41 ದಿನಗಳಿಂದ ಮೃತ ರೈತರ ತಲೆಬುರಡೆ ಉಟ್ಟುಕೊಂಡು ಹೋರಾಟ ನಡೆಸಿ ಇಡೀ ದೇಶದ ಜನರ ಗಮನ ಸೆಳೆದಿದ್ದ ತಮಿಳುನಾಡು ರೈತರ ಪ್ರತಿಭಟನೆ ಒಂದು ತಿಂಗಳ ಮಟ್ಟಿಗೆ ಸ್ಥಗಿತಗೊಳ್ಳಲಿದೆ. 
ರೂ.40 ಸಾವಿರ ಕೋಟಿ ಬರ ಪರಿಹಾರ, ರೈತರ ಸಾಲ ಮನ್ನಾ, ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇಟ್ಟುಕೊಂಡು ವಿಶಿಷ್ಟ ಹೋರಾಟ ನಡೆಸಿದ್ದ ರೈತರು ಕೊನೆಗೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರ ಭರವಸೆಗೆ ಮಣಿದಿದ್ದು, ಮೇ.25 ರವರೆಗೆ ಹೋರಾಟ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. 
ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿಯವರು ನಿನ್ನೆ ಬೆಳಿಗ್ಗೆ ಜಂತರ್ ಮಂತರ್ ನಲ್ಲಿ ಪ್ರತಿಭಠನೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿ ಪ್ರಧಾನಿ ಮೋದಿಯವರ ಜೊತೆ ಈ ಬಗ್ಗೆ ಮಾತನಾಡುವ ಭರವಸೆ ನೀಡಿದರು ಹಾಗೂ ಹೋರಾಟ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ರೈತ ಮುಖಂಡ ಅಯ್ಯಕ್ಕಣ್ಣು ಸಂಜೆ ಸುದ್ದಿಗೋಷ್ಠಿಯಲ್ಲಿ ಹೋರಾಟ ಅಮಾನತುಗೊಳಿಸುವ ಘೋಷಣೆ ಮಾಡಿದರು. 
ಮುಖ್ಯಮಂತ್ರಿ ಪಳನಿಸ್ವಾಮಿ ನೀಡಿದ ಭರವಸೆಯನ್ವಯ 1 ತಿಂಗಳ ಮಟ್ಟಿಗೆ ಹೋರಾಟವನ್ನು ನಿಲ್ಲಿಸಲಿದ್ದೇವೆ, ಸರ್ಕಾರಕ್ಕೆ ಇದು ಕೊನೆ ಅವಕಾಶ. ಒಂದು ವೇಳೆ ಬೇಡಿಕೆಗಳು ಈಡೇರದೇ ಹೋದರೆ ಮೇ.25 ರಿಂದ ಮತ್ತೆ ಇದೇ ಸ್ಥಳದಲ್ಲಿ ಪ್ರತಿಭಟನೆ ಆರಂಭಿಸುತ್ತೇವೆಂದು ಎಚ್ಚರಿಸಿದರು. 
SCROLL FOR NEXT