ದೇಶ

ದೆಹಲಿ ಚುನಾವಣೆ ಫಲಿತಾಂಶ: ಅಜಯ್ ಮಾಕೇನ್ ನಂತರ ಪಿಸಿ ಚಾಕೋ ರಾಜಿನಾಮೆ

Lingaraj Badiger
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಾಕೇನ್ ಅವರು ರಾಜಿನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ದೆಹಲಿ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ಚಾಕೋ ಸಹ ರಾಜಿನಾಮೆ ನೀಡಿದ್ದಾರೆ.
ನಾವಿಬ್ಬರು ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದೇವೆ. ಹೀಗಾಗಿ ನಾನು ದೆಹಲಿ ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಚಾಕೋ ತಿಳಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಚಾಕೋ ಹೇಳಿದ್ದಾರೆ.
ಅಜಯ್ ಮಾಕೇನ್ ಅವರ ಕಾರ್ಯವೈಖರಿ ಹಾಗೂ ಪಕ್ಷದ ಕೆಲವು ಹಿರಿಯ ನಾಯಕರನ್ನು ಕಡೆಗಣಿಸಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂಬ ಆರೋಪಗಳನ್ನು ತಳ್ಳಿಹಾಕಿರುವ ಚಾಕೋ, ನನ್ನ ಪ್ರಕಾರ ಸೋಲಿಗೆ ಅದೊಂದೇ ಕಾರಣ ಅಲ್ಲ ಎಂದಿದ್ದಾರೆ.
ದೆಹಲಿಯ ಮೂರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಮೂರರಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
SCROLL FOR NEXT