ಕರಾಚಿ: ಸಾಗರ ಗಡಿ ಉಲ್ಲಂಘನೆ ಮಾಡಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ 29 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಪಾಕಿಸ್ತಾನ ಕಡಲು ಭದ್ರತಾ ಸಂಸ್ಥೆಯ ವಕ್ತಾರ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 29 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೆ, 5 ದೋಣಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿಯೂ ಇದೇ ರೀತಿಯಾಗಿ ಆರೋಪ ಮಾಡಿದ್ದ ಪಾಕಿಸ್ತಾನ 19 ದೋಣಿಗಳನ್ನು ವಶಕ್ಕೆ ಪಡೆದುಕೊಂಡು 100 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಏಪ್ರಿಲ್ 9 ರಂದು ಕೂಡ 42 ಮೀನುಗಾರರನ್ನು ಬಂಧಿಸಿತ್ತು.