ರಾಯ್ಪುರ: ಛತ್ತೀಸ್ಗಢದ ಸುಕ್ಮಾ ನಕ್ಸಲ್ ಭೀಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕರ ಹೆಸರುಗಳ ಪಟ್ಟಿಯನ್ನು ಬಹುಮಾನ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಪಟ್ಟಿಯಲ್ಲಿರುವ ಹೆಸರುಗಳ ಕುರಿತಂತೆ ಯಾವುದೇ ನಕ್ಸಲ್ ನಾಯಕನ ಬಗ್ಗೆ ಮಾಹಿತಿಗಳನ್ನು ನೀಡಿದರೆ, ಬಹುಮಾನವನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಛತ್ತೀಸ್ಗಢ ರಾಜ್ಯದ ಸುಕ್ಮಾದ ರಸ್ತೆಯೊಂದರಲ್ಲಿ ಕಾರ್ಮಿಕರು ಕಾಮಗಾರಿ ಕಾರ್ಯವನ್ನು ಮಾಡುತ್ತಿದ್ದರು ಈ ವೇಳೆ 150ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸುತ್ತಿದ್ದರೆ. ಈ ವೇಳೆ ಸ್ಥಳಕ್ಕೆ ಬಂದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಅಧಿಕಾರಿಗಳು ನಕ್ಸಲರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೀಗ ನಕ್ಸಲರ ಕುರಿತಂತೆ ಸಾರ್ವಜನಿಕರ ನೆರವು ಪಡೆಯಲು ಮುಂದಾಗಿರುವ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕ್ಸಲರ ನಾಮಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಪೋಸ್ಟರ್ ಗಳು ಹಾಗೂ ನಕ್ಸಲರ ಕುರಿತ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್ ಗಳಲ್ಲಿ ಮಾಹಿತಿಗಳನ್ನು ಹಂಚಲಾಗಿದ್ದು, ಇದರಿಂದ ಜನರಿಗೆ ಜಾಗೃತಿಯನ್ನು ಮೂಡಿಸಿ, ಅವರಿಂದ ಸಹಾಯ ಪಡೆಯಲು ನಿರ್ಧಾರ ಕೈಕೊಳ್ಳಲಾಗಿದೆ. ಪೊಲೀಸರೊಂದಿಗೆ ಸಹಾಕರ ನೀಡುವವರಿಗೆ ಛತ್ತೀಸ್ಗಢ ಸರ್ಕಾರ ನಗದು ಬಹುಮಾನವನ್ನು ನೀಡಲಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಜಿತೇಂದ್ರ ಶುಕ್ಲಾ ಅವರು ಹೇಳಿದ್ದಾರೆ.
ನಕ್ಸಲ್ ನಾಯಕರನ್ನು ಹಿಡಿದುಕೊಟ್ಟವರಿಗೆ ರೂ.1 ಲಕ್ಷದಿಂದ 50 ಲಕ್ಷದವರೆಗೆ ಬಹುಮಾನವನ್ನು ನೀಡಲಾಗುತ್ತದೆ. ನಕ್ಸಲ್ ನಾಯಕರ ರ್ಯಾಂಕ್ ಗೆ ಸಂಬಂಧಿಸಿದಂತೆ ಬಹುಮಾನವನ್ನು ನೀಡಲಾಗುತ್ತದೆ. ಪೋಸ್ಟರ್ ಗಳಲ್ಲಿ ನಕ್ಸಲರ ಹೆಸರು, ಭಾವಚಿತ್ರ ಹಾಗೂ ಇನ್ನಿತರೆ ಮಾಹಿತಿಗಳನ್ನು ನೀಡಲಾಗಿದೆ.
ಇನ್ನು ನಕ್ಸಲರ ಕುರಿತಂತೆ ಮಾಹಿತಿಗಳನ್ನು ನೀಡುವವರಿಗೆ ಕನಿಷ್ಟವೆಂದರೂ ರೂ.1 ಲಕ್ಷ ನೀಡಲಾಗುತ್ತದೆ. ಪೊಲೀಸ್ ಅಧಿಕಾರಿಗಳ ಅಧಿಕೃತ ಫೋನ್ ಸಂಖ್ಯೆಗಳ ಮೂಲಕ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಶುಕ್ಲಾ ತಿಳಿಸಿದ್ದಾರೆ.