ಕಲ್ಲು ತೂರಾಟಕ್ಕೆ ಹಾನಿಗೀಡಾದ ಕಾರು ಮತ್ತು ಆರ್ ಎಸ್ಎಸ್ ನಾಯಕ ರಾಕೇಶ್ ಸಿನ್ಹಾ
ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಒಂದು ವಿಭಾಗ ಬಹಳ ಕ್ರಿಯಾಶೀಲವಾಗಿ ಉಗ್ರವಾದಿ ಅಂಶಗಳಿಗೆ ಕರುಣೆ ತೋರಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರೋಪಿಸಿದೆ.
ಸುಕ್ಮಾ ಮತ್ತು ಕುಪ್ವಾರ ದಾಳಿಯನ್ನು ಖಂಡಿಸಿದ್ದಕ್ಕಾಗಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರ ಕಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಾಳು ಮಾಡಿದ ಹಿನ್ನೆಲೆಯಲ್ಲಿ ಆರ್ ಎಸ್ಎಸ್ ನಾಯಕ ರಾಕೇಶ್ ಸಿನ್ಹಾ ಅವರು ಈ ಹೇಳಿಕೆ ನೀಡಿದ್ದಾರೆ.
ನಕ್ಸಲೀಯರ ಕೃತ್ಯಗಳಿಗೆ ಕರುಣೆ ತೋರಿಸುವ ವಿದ್ಯಾರ್ಥಿಗಳು ಮತ್ತು ಬೋಧಕರು ವಿಶ್ವವಿದ್ಯಾಲಯದಲ್ಲಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರಲ್ಲಿ ಸೈದ್ಧಾಂತಿಕ ನ್ಯಾಯಸಮ್ಮತತೆ ಮತ್ತು ಸೂಕ್ಷ್ಮ ಮನಸ್ಸು ಇರುವುದಿಲ್ಲ. ದಂತೇವಾಡದಿಂದ ಸುಕ್ಮಾವರೆಗೆ ಅವರು ನಕ್ಸಲೀಯರನ್ನು ಹೊಗಳುತ್ತಿದ್ದು ಸಿಆರ್ ಪಿಎಫ್ ನ ಸಿಬ್ಬಂದಿಗಳ ಹತ್ಯೆಯನ್ನು ಹೊಗಳುವವರು ವಿಶ್ವವಿದ್ಯಾಲಯದಲ್ಲಿ ಇದ್ದಾರೆ ಎಂದು ಸಿನ್ಹಾ ಹೇಳಿದರು.
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಬೋಧಿಸುವ ಪ್ರೊ. ಬುದ್ಧ ಸಿಂಗ್ ಇಂದು ತಮ್ಮ ಕಾರಿನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಸುಕ್ಮಾದಲ್ಲಿ ಮಾವೋವಾದಿಗಳಿಂದ ಹತರಾದ ಸಿಆರ್ ಪಿಎಫ್ ಸಿಬ್ಬಂದಿಗೆ ಗೌರವ ಶ್ರದ್ಧಾಂಜಲಿ ಸಭೆ ಕರೆದಿದ್ದಕ್ಕಾಗಿ ತಮಗೆ ಸರಿಯಾದ ಉಡುಗೊರೆ ಸಿಕ್ಕಿದೆ ಎಂದು ಹೇಳಿದ್ದರು.
ಶ್ರದ್ಧಾಂಜಲಿ ಸಭೆಯನ್ನು ವಿಶ್ವವಿದ್ಯಾಲಯದ ಸಬರ್ಮತಿ ಡಾಬಾದಲ್ಲಿ ಆಯೋಜಿಸಲಾಗಿತ್ತು. ಈ ಮಧ್ಯೆ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ 427ರಡಿಯಲ್ಲಿ ವಸಂ ತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.