ನವದೆಹಲಿ: ಒಡಿಶಾದಲ್ಲಿ ಅಗತ್ಯ ಅನುಮತಿ ಪಡೆಯದೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಶೇ.100ರಷ್ಟು ದಂಡ ವಿಧಿಸಿದೆ.
2014, ಏಪ್ರಿಲ್ ನಲ್ಲಿ ಒಡಿಶಾದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಎಂ.ಬಿ. ಷಾ ವಿಚಾರಣಾ ಆಯೋಗ ನೀಡಿದ ವರದಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್ ಜಿಒವೊಂದರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅಕ್ರಮ ಕಂಪನಿಗಳಿಗೆ ಶೇ.100ರಷ್ಟು ದಂಡ ವಿಧಿಸಿದೆ.
ಈ ಮುಂಚೆ ಸೆಪ್ಟೆಂಬರ್ 21, 2016ರಲ್ಲಿ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಮತ್ತು ಒಡಿಶಾ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಸರ್ದಾ ಮೈನ್ಸ್ ಮತ್ತು ಜಿಂದಾಲ್ ಸ್ಟೀಲ್ ಆಂಡ್ ಪವರ್ ಲಿಮಿಟೆಡ್(ಜೆಎಸ್ ಪಿಎಲ್) ಉಕ್ಕು ಅದಿರು ಹಂಚಿಕೆ ಒಪ್ಪಂದದ ಕುರಿತು ಎರಡು ತಿಂಗಳಲ್ಲಿ ವಿಸ್ತೃತ ವರದಿ ನೀಡುವಂತೆ ಸೂಚಿಸಿತ್ತು.
ಅಕ್ರಮವಾಗಿ ತೆಗೆಯಲಾದ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಮೌಲ್ಯ ರೂ. 59,200 ಕೋಟಿಗಳಾಗಿದ್ದು, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ರಾಜ್ಯ ಸರ್ಕಾರ ಈ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಎಂ.ಬಿ,ಷಾ ವರದಿ ಹೇಳಿದೆ.