ನವದೆಹಲಿ: ವಿದೇಶಾಂಗ ನೀತಿಯ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಿರೋಧ ಪಕ್ಷಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಶುಕ್ರವಾರ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರ ಲಾಹೋರ್ ಭೇಟಿ ಕುರಿತು ತಪ್ಪು ಮಾಹಿತಿ ನೀಡಿದ್ದಾರೆಂದು ವಿರೋಧ ಪಕ್ಷಗಳು ಆರೋಪ ಮಾಡಿವೆ. ಮೋದಿ ಲಾಹೋರ್ ಭೇಟಿಯ ನಂತರ ಭಾರತದಲ್ಲಿ ಯಾವುದೇ ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಪ್ರಧಾನಿ ಲಾಹೋರ್ ಭೇಟಿ ನೀಡಿದ ಕೆಲ ದಿನಗಳಲ್ಲಿ ಪಠಾಣ್ ಕೋಟ್ ಸೇನಾನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಅಲ್ಲದೆ ಇದೇ ರೀತಿ ಐದು ಉಗ್ರ ದಾಳಿಗಳು ಭಾರತದಲ್ಲಿ ನಡೆದಿದ್ದವು ಎಂದು ವಿಪಕ್ಷಗಳು ಆರೋಪಿಸಿದ್ದವು.
ಈ ನಡುವೆ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಸುಷ್ಮಾ ಸ್ವರಾಜ್ ಅವರು, ನಾನು ಬ್ಯಾಂಬರ್ಗ್ ಏಷ್ಯಾ ಆಫ್ರಿಕಾ ಸಂಬಂಧಗಳ ಸಮಾವೇಶದ ವೇಳೆ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ವಿರೋಧ ಪಕ್ಷಗಳು ಉದ್ದೇಶಿತ ಕೆಲ ವಿಡಿಯೋಗಳನ್ನು ತೆಗೆದುಕೊಂಡು ಅದನ್ನೇ ಸಾಕ್ಷ್ಯಾಧಾರವೆಂಬಂತೆ ತೋರಿಸುತ್ತಿವೆ ಎಂದು ಹೇಳಿದ್ದಾರೆ.