ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ವಿದೇಶಾಂಗ ನೀತಿಯ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಿರೋಧ ಪಕ್ಷಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಶುಕ್ರವಾರ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲಿವೆ.
ಬ್ಯಾಂಬರ್ಗ್ ಏಷ್ಯಾ ಆಫ್ರಿಕಾ ಸಂಬಂಧಗಳ ಸಮಾವೇಶದ ವೇಳೆ ಮತ್ತು 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲಾಹೋರ್ ಭೇಟಿ ಕುರಿತು ತಪ್ಪು ಮಾಹಿತಿ ನೀಡಿದ್ದಾರೆಂದು ವಿರೋಧ ಪಕ್ಷಗಳು ಆರೋಪಿ ಮಾಡಿವೆ.
ಈ ನಡುವೆ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಸುಷ್ಮಾ ಸ್ವರಾಜ್ ಅವರು, ನಾನು ಬ್ಯಾಂಬರ್ಗ್ ಏಷ್ಯಾ ಆಫ್ರಿಕಾ ಸಂಬಂಧಗಳ ಸಮಾವೇಶದ ವೇಳೆ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ವಿರೋಧ ಪಕ್ಷಗಳು ಉದ್ದೇಶಿತ ಕೆಲ ವಿಡಿಯೋಗಳನ್ನು ತೆಗೆದುಕೊಂಡು ಅದನ್ನೇ ಸಾಕ್ಷ್ಯಾಧಾರವೆಂಬಂತೆ ತೋರಿಸುತ್ತಿವೆ ಎಂದಿದ್ದಾರೆ.
ಇದರಂತೆ ಮೋದಿ ಲಾಹೋರ್ ಭೇಟಿ ಕುರಿತಂತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ಮೋದಿ ಲಾಹೋರ್ ಭೇಟಿ ಬಳಿಂಕ ಅಂತಹ ಯಾವುದೇ ರೀತಿಯ ಉಗ್ರ ದಾಳಿ ಘಟನೆಗಳು ನಡೆದಿಲ್ಲ ಎಂದಿದ್ದಾರೆ.
ಸುಷ್ಮಾಸ್ವರಾಜ್ ಅವರು ಹೇಳಿಕೆ ನೀಡುತ್ತಿದ್ದಂತೆಯೇ ಕಿಡಿಕಾಡಿರುವ ವಿರೋಧ ಪಕ್ಷಗಳ ನಾಯಕರು, ಮೋದಿ ಲಾಹೋರ್ ಗೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಪಠಾಣ್ ಕೋಟ್ ಸೇನಾನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದಲ್ಲದೆ, ಇದೇ ರೀತಿಯ 5 ಉಗ್ರರ ದಾಳಿ ನಡೆದಿದ್ದವು ಎಂದಿವೆ.