ನವದೆಹಲಿ: ಗುಜರಾತ್ ರಾಜ್ಯಸಭೆ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಹೊಸದೊಂದು ತಲೆನೋವು ಶುರುವಾಗಿದ್ದು, ತಮ್ಮ ಅಧಿಕಾರ ಮೊಟಕುಗೊಳಿಸಿದಕ್ಕೆ ಪ್ರತಿಭಟನಾರ್ಥವಾಗಿ, ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ಹಿರಿಯ ಮುಖಂಡ ಮತ್ತು ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಪ್ರಸ್ತುತ ಆಂಧ್ರ ಪ್ರದೇಶ ಘಟಕದ ಉಸ್ತುವಾರಿ ಹೊಣೆ ಹೊತ್ತಿದ್ದ ಸಿಂಗ್ ಅವರು, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ. ಈ ಹಿಂದೆ ಗೋವಾ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಪಕ್ಷದ ಜವಾಬ್ದಾರಿಯನ್ನು ದಿಗ್ವಿಜಯ್ ಸಿಂಗ್ ಹೊಂದಿದ್ದರು. ಏತನ್ಮಧ್ಯೆ ಗೋವಾದಲ್ಲಿ ನಡೆದ ಚುನಾವಣೋತ್ತರ ಪರಿಸ್ಥಿತಿ ನಿಭಾಯಿಸಲು ವಿಫಲವಾದದ್ದು ಹಾಗೂ ಪಕ್ಷವನ್ನು ತಪ್ಪುದಾರಿಗೆ ಎಳೆದ ಆರೋಪ ಇವರ ಮೇಲಿತ್ತು. ಗೋವಾದಲ್ಲಿ ಅತೀ ಹೆಚ್ಚು ಶಾಸಕ ಬೆಂಬಲವನ್ನು ಹೊಂದಿದ್ದರೂ ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು.
ಇದೇ ಕಾರಣಕ್ಕೆ ದಿಗ್ವಿಜಯ್ ಸಿಂಗ್ ವಿರುದ್ಧ ಕಾಂಗ್ರೆಸ್ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ದಿಗ್ವಿಜಯ್ ಸಿಂಗ್ ಅವರ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸಲಾಗಿತ್ತು. ಇದೇ ಅಸಮಾಧಾನದಿಂದಾಗಿ ದಿಗ್ವಿಜಯ್ ಸಿಂಗ್ ಅವರು ನರ್ಮದಾ ಯಾತ್ರೆಯ ನೆಪ ಮಾಡಿ ತಮ್ಮನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.
ಆಧ್ಯಾತ್ಮಿಕ, ವೈಯಕ್ತಿಕ ಹಾಗೂ ರಾಜಕೀಯ ರಹಿತ ಆರು ತಿಂಗಳ ನರ್ಮದಾ ಯಾತ್ರೆಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದಿಗ್ವಿಜಯ ಸಿಂಗ್ ಈ ಮನವಿ ಮಾಡಿದ್ದು, 3,300 ಕಿಲೋ ಮೀಟರ್ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ, 'ನರ್ಮದಾ ಪರಿಕ್ರಮ' ಹೆಸರಿನ ಈ ಯಾತ್ರೆ ಮಧ್ಯ ಪ್ರದೇಶ ಹಾಗೂ ಗುಜರಾತ್ ನ ಎಲ್ಲ ಭಾಗಗಳನ್ನು ಒಳಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜವಾಬ್ದಾರಿಯಿಂದ ಹಿಂದೆ ಸರಿಯಲು ಮುಂದಾದ ಮತ್ತೊರ್ವ ನಾಯಕಿ
ಮತ್ತೊಂದೆಡೆ ದಿಗ್ವಿಜಯ್ ಸಿಂಗ್ ಮನವಿ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಮತ್ತೋರ್ವ ಹಿರಿಯ ನಾಯಕಿ ಅಂಬಿಕಾ ಸೋನಿ ಅವರೂ ಕೂಡ ಅನಾರೋಗ್ಯದ ನೆಪವೊಡ್ಡಿ ಜವಾಬ್ದಾರಿಯಿಂದ ಹಿಂದೆ ಸರಿಯಲು ಯತ್ನಿಸಿದ್ದಾರೆ. ಜಮ್ಮು ಕಾಶ್ಮೀರ, ಉತ್ತರಾಖಂಡ ಹಾಗೂ ಹಿಮಾಚಲಪ್ರದೇಶದ ಉಸ್ತುವಾರಿಯನ್ನು ಅಂಬಿಕಾ ಸೋನಿ ಹೊಂದಿದ್ದಾರೆ.