ಅಹ್ಮದಾಬಾದ್: ದೇಶದ ಪ್ರಮುಖ ಟೆಲಿಕಾಂ ಕಂಪೆನಿ ಭಾರ್ತಿ ಏರ್ ಟೆಲ್ ಗೆ ಅಹ್ಮದಾಬಾದ್ ಗ್ರಾಮೀಣ ಗ್ರಾಹಕರ ವಿವಾದ ಪರಿಹಾರ ನಿಯೋಗ ಗ್ರಾಹಕರೊಬ್ಬರಿಗೆ ಡಾಟಾ ಕಳೆದುಕೊಂಡದ್ದಕ್ಕೆ 44 ರೂಪಾಯಿ 50 ಪೈಸೆ ನೀಡುವಂತೆ ಆದೇಶ ನೀಡಿದೆ. 2015ರಲ್ಲಿ ಗುಜರಾತ್ ನ ಪಾಟೀದಾರ ಮೀಸಲಾತಿ ಪ್ರತಿಭಟನೆ ಸಂದರ್ಭದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಹಣವನ್ನು ಗ್ರಾಹಕನಿಗೆ ನೀಡಬೇಕೆಂದು ಹೇಳಿದೆ.
ಮೊನ್ನೆ ಜುಲೈ 25ರಂದು ಆದೇಶ ನೀಡಿದ ಆಯೋಗ, 2015, ಆಗಸ್ಟ್ 26ರಿಂದ ಅಂಜನಾ ಬ್ರಹ್ಮಭಟ್ ಅವರಿಗೆ 44 ರೂಪಾಯಿ 50 ಪೈಸೆಯನ್ನು ಶೇಕಡಾ 12ರಷ್ಟು ಬಡ್ಡಿಯೊಂದಿಗೆ ನೀಡಬೇಕೆಂದು ಭಾರ್ತಿ ಏರ್ ಟೆಲ್ ಕಂಪೆನಿಗೆ ತಿಳಿಸಿದೆ. ಪಾಟಿದಾರ ಮೀಸಲಾತಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದ ಸಮಯದಲ್ಲಿ 2015 ಆಗಸ್ಟ್ 27ರಿಂದ ಸೆಪ್ಟೆಂಬರ್ 4ರವರೆಗೆ ಭಾರ್ತಿ ಏರ್ ಟೆಲ್ ಇಂಟರ್ನೆಟ್ ಸೇವೆಯನ್ನು ಗುಜರಾತ್ ನಲ್ಲಿ ಸ್ಥಗಿತಗೊಳಿಸಿತ್ತು.
ಈ ಬಗ್ಗೆ ಕಂಪೆನಿಯನ್ನು ಕೇಳಿದಾಗ ಬ್ರಹ್ಮ್ ಭಟ್ ಅವರಿಗೆ ಕಂಪೆನಿ ಹಣ ನೀಡಲಿಲ್ಲ. ಅವರು 2ಜಿಬಿ ಇಂಟರ್ ನೆಟ್ ಪ್ಯಾಕೇಜ್ ಗೆ 28 ದಿನಕ್ಕೆ 2015, ಆಗಸ್ಟ್ 5ರಂದು 178 ರೂಪಾಯಿ ನೀಡಿದ್ದರು. ಅದಕ್ಕೆ ಅವರು ಗ್ರಾಹಕರ ವ್ಯಾಜ್ಯ ಆಯೋಗದ ಮೊರೆ ಹೋದರು.