ದೇಶ

ರಾಹುಲ್ ಗಾಂಧಿ ಭದ್ರತಾ ನಿಯಮಗಳನ್ನು ಪಾಲಿಸುತ್ತಿಲ್ಲ; ಏನನ್ನು ಮುಚ್ಚಿಡುತ್ತಿದ್ದಾರೆ?: ರಾಜನಾಥ ಸಿಂಗ್

Manjula VN

ನವದೆಹಲಿ: ರಾಹುಲ್ ಕಾರಿನ ಮೇಲೆ ಕಲ್ಲೆಸೆತ ಪ್ರಕರಣ ಸಂಬಂಧ ಭದ್ರತಾ ವೈಫಲ್ಯ ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭದ್ರತಾ ನಿಯಮಗಳನ್ನು ಪಾಲಿಸಿಲ್ಲ ಎಂದು ಮಂಗಳವಾರ ಹೇಳಿದ್ದಾರೆ. 

ಈ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿರುವ ಅವರು, ಪ್ರವಾಹ ಪೀಡಿತ ಗುಜರಾತ್ ರಾಜ್ಯಕ್ಕೆ ಭೇಟಿ ನೀಡುವ ವೇಳೆ ರಾಹುಲ್ ಗಾಂಧಿಯವರು ಭದ್ರತಾ ನಿಯಮಗಳನ್ನು ಪಾಲಿಸಿಲ್ಲ. ಭದ್ರತಾ ದೃಷ್ಟಿಯಿಂದಾಗಿ ನೀಡಲಾಗಿದ್ದ ಗುಂಡು ನಿರೋಧಕ ಕಾರು ಬಳಕೆ ಮಾಡಲು ನಿರಾಕರಿಸಿದ್ದರು ಎಂದು ಹೇಳಿದ್ದಾರೆ. 

ರಾಹುಲ್ ಭದ್ರತೆಗಾಗಿ ಸಾಕಷ್ಟು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಆದರೆ, ಅದನ್ನೂ ರಾಹುಲ್ ನಿರಾಕರಿಸಿದ್ದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಎಸ್'ಪಿಜಿ ಅಧಿಕಾರಿಗಳ ಮಾತನ್ನೂ ರಾಹುಲ್ ಕೇಳಿಲ್ಲ. ಕೇವಲ ತಮ್ಮ ಆಪ್ತ ಕಾರ್ಯದರ್ಶಿಯನ್ನು ಮಾತ್ರ ಜೊತೆಯಲ್ಲಿಟ್ಟುಕೊಂಡಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ, ಭದ್ರತಾ ದೃಷ್ಟಿಯಿಂದ ಕಾರು ಕೊಟ್ಟಿದ್ದರೂ ರಾಹುಲ್ ಮಾತ್ರ ಕಾರಿನಲ್ಲಿ ಕುಳಿತುಕೊಂಡಿಲ್ಲ. 

ರಾಹುಲ್ ಅವರು ಭದ್ರತೆಗೆ ಸಂಬಂಧಿಸಿದ ಸಲಹೆಗಳನ್ನು ಪಾಲನೆ ಮಾಡಬೇಕಿದೆ. ಪ್ರಸ್ತುತ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. 

ಕಳೆದೆರಡು ವರ್ಷಗಳಲ್ಲಿ ರಾಹುಲ್ ಅವರು 6 ಸಂದರ್ಭಗಳಲ್ಲಿ 72 ದಿನ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಆದರೆ ಈ ಯಾವುದೇ ಭೇಟಿ ಸಂದರ್ಭದಲ್ಲಿಯೂ ಭದ್ರತಾ ಪಡೆಗಳಿಂದ (ಎಸ್'ಪಿಜಿ) ಭದ್ರತೆಯನ್ನು ಪಡೆದುಕೊಂಡಿಲ್ಲ. ಆವರು ಎಲ್ಲಿ ಹೋಗುತ್ತಾರೆ ಹಾಗೂ ಯಾವ ಕಾರಣಕ್ಕೆ ಎಸ್'ಪಿಜಿ ಭದ್ರತೆಯನ್ನು ಪಡೆದುಕೊಳ್ಳುತ್ತಿಲ್ಲ ಎಂಬುದನ್ನು ನಾವು ತಿಳಿಯ ಬಯಸುತ್ತೇವೆ ಎಂದು ಅಗ್ರಹಿಸಿದ್ದಾರೆ. 

ವಿದೇಶ ಪ್ರವಾಸಗಳ ಸಂದರ್ಭ ಎಸ್'ಪಿಜಿ ಭದ್ರತೆ ಪಡೆಯದೆ ಅವರು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನಿಸಿದರು.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಹಾಗೂ ಆರ್'ಎಸ್ಎಸ್ ವಿರುದ್ಧ ಆರೋಪ ಮಾಡಿದ್ದ ರಾಹುಲ್ ಗಾಂಧಿಯವರು ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಕಲ್ಲುಗಳನ್ನು ಎಸೆದರು. ಈ ವೇಳೆ ನನ್ನ ಆಪ್ತ ಕಾರ್ಯದರ್ಶಿಗೆ ಗಾಯವಾಗಿತ್ತು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್'ಎಸ್ಎಸ್ ನವರ ರಾಜಕೀಯ ಶೈಲಿಯಾಗಿದೆ. ದಾಳಿ ಕೃತ್ಯವನ್ನು ಬಿಜೆಪಿಯವರೇ ಮಾಡಿದ್ದು, ಬಿಜೆಪಿ ನಾಯಕರು ಈ ಘಟನೆಯನ್ನು ಖಂಡಿಸುತ್ತಾರೆಯೇ...? ಎಂದು ಪ್ರಶ್ನಿಸಿದ್ದರು. 

ಆ.4 ರಂದು ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಗುಜರಾತ್'ಗೆ ತೆರಳಿದ್ದ ವೇಳೆ ರಾಹುಲ್ ಗಾಂಧಿಯವರ ಕಾರಿನ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರ ಘೋಷಣೆಗಳನ್ನು ಕೂಗಿದ್ದರು. 
SCROLL FOR NEXT