ನವದೆಹಲಿ: ರಾಜ್ಯಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ ವಿರುದ್ಧ ತಾವು ಗೆಲುವು ಸಾಧಿಸಿದ್ದು, ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ ಮೂಡಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಅವರು ಗುರುವಾರ ಹೇಳಿದ್ದಾರೆ.
ಇತ್ತೀಚಿಗೆ ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅಹಮದ್ ಪಟೇಲ್ ಅವರು, ಈ ಗೆಲುವು ಕಾಂಗ್ರೆಸ್ ಗೆ ಮತ್ತಷ್ಟು ಶಕ್ತಿ ಮತ್ತು ಉತ್ಸಾಹ ತುಂಬಿದೆ ಎಂದಿದ್ದಾರೆ.
ಇಂದು ಜಂತರ್ ಮಂತರ್ ನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅಹಮದ್ ಪಟೇಲ್ ಅವರು, ರಾಜ್ಯಸಭೆ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಆದರೂ ಗೆಲವು ಸಾಧಿಸಲಿಲ್ಲ. ಈ ವರ್ಷಾಂತ್ಯಕ್ಕೆ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತ ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಈ ಇಬ್ಬರೂ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.