ದೇಶ

ಆ.15ರಂದು ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾರಾಟ ಕಡ್ಡಾಯ: ಮದರಸಾಗಳಿಗೆ 'ಮದರಸಾ ಶಿಕ್ಷಾ ಪರಿಷತ್ ಸೂಚನೆ'

Manjula VN

ಲಖನೌ: ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ರಾಜ್ಯದಲ್ಲಿರುವ ಎಲ್ಲಾ ಮದರಸಾಗಳಲ್ಲೂ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆಯನ್ನು ಹಾಡಬೇಕೆಂದು ಉತ್ತರಪ್ರದೇಶದ ಮದರಸಾ ಶಿಕ್ಷಾ ಪರಿಷತ್ ಶುಕ್ರವಾರ ನಿರ್ದೇಶನ ನೀಡಿದೆ. 

ಈ ಹಿಂದೆಯೂ ಇಂಥಹ ಸೂಚನೆಗಳು ಮದರಸಾಗಳಿಗೆ ರಾಜ್ಯ ಸರ್ಕಾರದಿಂದ ರವಾನೆಯಾಗುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚನೆ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. 

ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಮದರಸಾಗಳಿಗೂ ಸೂಚನೆ ನೀಡಿರುವ ಮದರಸಾ ಶಿಕ್ಷಾ ಪರಿಷತ್, ಸ್ವಾತಂತ್ರ್ಯ ದಿನಚರಣೆಯಂದು ದ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡುವಂತೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದೆ. ಅಲ್ಲದೆ, ಸ್ವಾತಂತ್ರ್ಯ ದಿನದ ವೇಳೆ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ತಿಳಿಸಿರುವ ಪರಿಷತ್, ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಹೇಳಿಬೇಕು, ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳಬೇಕೆಂದು ನಿರ್ದೇಶಿಸಿದೆ. 

ಸುತ್ತೋಲೆಯಲ್ಲಿ 8 ಗಂಟೆ ವೇಳೆಗೆ ಧ್ವಜಾರೋಹಣ ಮಾಡಿ, ತಮ್ಮಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋಗಳನ್ನು ಶಿಕ್ಷಣ ಪರಿಷತ್ ಗೆ ಕಳುಹಿಸಬೇಕೆಂದು ತಾಕೀತು ಮಾಡಲಾಗಿದೆ. 

ಕೆಲ ದಿನಗಳ ಹಿಂದೆಷ್ಟೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮದರಸಾ ಶಿಕ್ಷಾ ಪರಿಷತ್ ಗೆ ಸೂಚನೆಯೊಂದನ್ನು ನೀಡಿತ್ತು. ಆಗಸ್ಟ್ 15 ರಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಲಾಗಿತ್ತು. 

ಸರ್ಕಾರ ಸೂಚನೆಯಂತೆಯೇ ಎಲ್ಲಾ ಮದರಸಾಗಳಿಗೂ ಮದರಸಾ ಶಿಕ್ಷಾ ಪರಿಷತ್ ಸುತ್ತೋಲೆಯನ್ನು ಹೊರಡಿಸಿದೆ. ಹೊಸ ಸೂಚನೆಗಳನ್ನು ಈಗಾಗಲೇ ಎಲ್ಲಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ರವಾನೆ ಮಾಡಿದ್ದು, ನಿರ್ದೇಶನಗಳನ್ನು ಕಠಿಣವಾಗಿ ಪಾಲನೆ ಮಾಡುವಂತೆ ತಿಳಿಸಲಾಗಿದೆ. 

ಉತ್ತರಪ್ರದೇಶದಲ್ಲಿ ಮದರಸಾ ಶಿಕ್ಷಣ ಪರಿಷತ್ ನಿಂದ ಅಂಗೀಕೃತವಾದ 8000 ಮದರಸಾಗಳಿದ್ದು, ಇವುಗಳಲ್ಲಿ 560 ಮದರಸಾಗಳು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನಿತ ಶಿಕ್ಷಣ ಸಂಸ್ಥೆಗಳಾಗಿವೆ. 
SCROLL FOR NEXT