ಲಖನೌ: ಉತ್ತರ ಪ್ರದೇಶದ ಗೋರಕ್ ಪುರದಲ್ಲಿರುವ ಬಿಆರ್ ಡಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸರಣಿ ಸಾವಿನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದ್ದು, ಸಿಎಂ ಆದಿತ್ಯಾನಾಥ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ನಿನ್ನೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ 12 ಮಕ್ಕಳ ಪೈಕಿ ಇಂದು ಮುಂಜಾನೆ ಇಬ್ಬರು ಹಾಗೂ ಇಂದು ಬೆಳಗ್ಗೆ 1 ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಇಂದು ಸಾವನ್ನಪ್ಪಿದ ಮಕ್ಕಳಿಗೆ ನಿನ್ನೆ ರಾತ್ರಿಯಿಂದಲೇ ಆಮ್ಲಜನಕ ಪೂರೈಕೆಯಾಗಿದೆಯಾದರೂ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಮಿದುಳಿನ ಸೋಂಕು ಕಾಯಿಲೆ (ಎನ್ಸೆಫಾಲಿಟಿಸ್)ಯಿಂದ ಬಳಲುತ್ತಿದ್ದ 11 ವರ್ಷದ ಬಾಲಕ ಸಾವನ್ನಪ್ಪಿದ್ದು, ಇದಕ್ಕೂ ಮೊದಲು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎರಡು ಶಿಶುಗಳು ಕೂಡ ಸಾವನ್ನಪ್ಪಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಠಿಣ ಕ್ರಮಕ್ಕೆ ಆದೇಶಿಸಿದ ಯೋಗಿ ಸರ್ಕಾರ
ಇನ್ನು ವಿಪಕ್ಷಗಳ ವ್ಯಾಪಕ ಟೀಕೆ ಹಾಗೂ ಜನರಲ್ಲಿ ಸರ್ಕಾರದ ವಿರುದ್ಧ ಮೂಡಬಹುದಾದ ತಪ್ಪು ಕಲ್ಪನೆಯನ್ನು ತಡೆಯುವ ನಿಟ್ಟಿನವಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯೋಗಿ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಅಂತೆಯೇ ಪ್ರಕರಣದಲ್ಲಿನ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆದೇಶ ನೀಡಿದೆ.