ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಯು ಪಕ್ಷದ ರಾಜ್ಯಸಭೆ ನಾಯಕ ಸ್ಥಾನದಿಂದ ಹಿರಿಯ ಮುಖಂಡ ಶರದ್ ಯಾದವ್ ಅವರನ್ನು ಶನಿವಾರ ವಜಾಗೊಳಿಸಲಾಗಿದೆ.
ಇತ್ತೀಚೆಗೆ ಆರ್ ಜೆಡಿ ಸಖ್ಯ ತೊರೆದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದರಿಂದ ಸಿಎಂ ನಿತೀಶ್ ಕುಮಾರ್ ವಿರುದ್ಧ ಶರದ್ ಯಾದವ್ ಅವರು ಮುನಿಸಿಕೊಂಡಿದ್ದರು. ಅಲ್ಲದೆ ನಿತೀಶ್ ನಿರ್ಧಾರವನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಈ ಘಟನೆ ಬಳಿಕ ಜೆಡಿಯುನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಇದೇ ಕಾರಣಕ್ಕೆ ನಿನ್ನೆ ನಿತೀಶ್ ಕುಮಾರ್ ಕೂಡ ಶರದ್ ಯಾದವ್ ಇಚ್ಛಿಸಿದರೆ ತಮ್ಮ ದಾರಿ ನೋಡಿಕೊಳ್ಳಬಹುದು. ಯಾವುದೇ ನಿರ್ಧಾರಕ್ಕೂ ಅವರು ಸ್ವತಂತ್ರರು ಎಂದು ಹೇಳುವ ಮೂಲಕ ತಮ್ಮ ಮತ್ತು ಶರದ್ ಯಾದವ್ ನಡುವಿನ ಕಲಹವನ್ನು ಬಹಿರಂಗ ಪಡಿಸಿದ್ದರು.
ಅಂತೆಯೇ ಬಿಜೆಪಿ ಜೊತೆಗೂಡಿದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ನಿತೀಶ್ ಕುಮಾರ್ ಅವರು, ಪಕ್ಷದ ಹಿತದೃಷ್ಟಿಯಿಂದಲೇ ತಾವು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದು, ಈ ಬಗ್ಗೆ ಅವರಿಗೆ ಚಕಾರವಿದ್ದರೆ ಅವರಿಚ್ಛಿಸಿದಂತೆ ಮಾಡಬಹುದು ಎಂದು ಹೇಳಿದ್ದರು. ಇದೀಗ ಅದರ ಮುಂದುವರಿದ ಭಾಗ ಎನ್ನುವಂತೆ ರಾಜ್ಯಸಭೆ ಜೆಡಿಯು ನಾಯಕ ಸ್ಥಾನದಿಂದ ಶರದ್ ಯಾದವ್ ಅವರನ್ನು ವಜಾ ಮಾಡಲಾಗಿದ್ದು, ಅವರ ಸ್ಥಾನಕ್ಕೆ ನಿತೀಶ್ ಕುಮಾರ್ ಆಪ್ತ ಆರ್ ಸಿಪಿ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶರದ್ ಯಾದವ್ ಅವರು, ಜೆಡಿಯು ನಿತೀಶ್ ಕುಮಾರ್ ಅವರ ಪಕ್ಷ ಮಾತ್ರವಲ್ಲ. ತಮ್ಮ ಪಕ್ಷ ಕೂಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.