ದೇಶ

71ನೇ ಸ್ವಾತಂತ್ರ್ಯೋತ್ಸವ: ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದ ರಾಷ್ಟ್ರಪತಿ

Manjula VN
ನವದೆಹಲಿ: ದೇಶದಾದ್ಯಂತ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಹುತಾತ್ಮ ವೀರ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಗೌರವ ನಮನ ಸಲ್ಲಿಸಿದ್ದಾರೆ. 
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ, ವಾಯುಸೇನಾ ಮುಖ್ಯಸ್ಥ ಸುನಿಲ್ ಲಿನ್ಬಾ, ಭೂಸೇನೆ ಮುಖ್ಯಸ್ಥ ಮಾರ್ಷಲ್ ಬಿರೇಂದರ್ ಸಿಂಗ್ ದನೋವಾ ಮತ್ತು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ರಕ್ಷಣಾ ಸಚಿವ ಅರುಣ್ ಜೇಟ್ಲಿಯವರೊಂದಿಗೆ ರಾಜಧಾನಿ ದೆಹಲಿ ಅಮರ್ ಜವಾನ್ ಜ್ಯೋತಿ ಬಳಿ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. 
71ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ನಿನ್ನೆಯಷ್ಟೇ ದೇಶದ ಜನತೆಗೆ ಶುಭಾಶಯಗಳನ್ನು ಕೋರಿ ಭಾಷಣ ಮಾಡಿದ್ದ ರಾಷ್ಟ್ರಪತಿ ಕೋವಿಂದ್ ಅವರು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದವರ ಮಹೋನ್ನತ ತ್ಯಾಗದಿಂದ ದೇಶದ ಜನರು ಪ್ರೇರಣೆ ಪಡೆದು ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಬೇಕೆಂದು ಹೇಳಿದ್ದರು. 
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಕೃತಜ್ಞರಾಗಿದ್ದೇವೆ. ಸರ್ಕಾರ ಕಾನೂನುಗಳನ್ನು ರೂಪಿಸಬಹುದು, ಅನುಷ್ಠಾನಿಸಬಹುದು ಹಾಗೂ ಬಲಪಡಿಸಬಹುದು. ಆದರೆ, ಕಾನೂನಿಗೆ ಬದ್ಧರಾಗಿ ಬದುಕುವುದು ಪ್ರತಿಯೋರ್ವ ಪ್ರಜೆಯ ಕರ್ತವ್ಯ ಎಂದು ತಿಳಿಸಿದ್ದರು. 
SCROLL FOR NEXT