ದೇಶ

ರೂ.57,000 ಮೌಲ್ಯದ ಟೊಮೆಟೋ ಕಳ್ಳತನ: ವ್ಯಕ್ತಿ ಬಂಧನ

Manjula VN
ಮುಂಬೈ: ದೇಶದಾದ್ಯಂತ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಟೊಮೆಟೋಗೆ ಇದೀಗ ಚಿನ್ನದ ಬೆಲೆ ಬಂದಂತಾಗಿದೆ. ಇಷ್ಟು ದಿನ ಚಿನ್ನದ ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ದುಷ್ಕರ್ಮಿಗಳು ಇದೀಗ ಟೊಮೆಟೋ ದರೋಡೆ ಮಾಡುವ ವೃತ್ತಿಗೆ ಇಳಿದಿದ್ದಾರೆ. 
ರೂ.57,000 ಮೌಲ್ಯದ ಟೊಮೆಟೋ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 54 ವರ್ಷದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 
ರಾಧೆಶ್ಯಾಮ್ ಗುಪ್ತಾ (54) ಬಂಧಿತ ವ್ಯಕ್ತಿಯಾಗಿದ್ದಾನೆ. ಜುಲೈ.18 ರಕಂದು ಮುಂಬೈನ ತರಕಾರಿ ಮಾರುಕಟ್ಟೆಯೊಂದರಲ್ಲಿ ಅಂಗಡಿಯೊಂದರಲ್ಲಿ ರೂ.57,000 ಮೌಲ್ಯದ 900 ಕೆಜಿ ತರಕಾರಿಗಳು ದರೋಡೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರು. 
ಇದರಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಹಲವು ಅಂಗಡಿ ಮಾಲೀಕರನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಅಂಗಡಿ ಮಾಲೀಕರು ನೀಡಿದ ಮಾಹಿತಿ ಮೇರೆಗೆ ರಾಧೆಶ್ಯಾಮ್ ನನ್ನು ಪೊಲೀಸರು ನಿನ್ನೆ ಸಂಜೆ ಬಂಧನಕ್ಕೊಳಪಡಿಸಿದ್ದಾರೆ. 
ಗುಪ್ತಾ ವಿರುದ್ಧ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಆ.18 ವರೆಗೂ ಪೊಲೀಸ್ ವಶಕ್ಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT