ದೇಶ

ಗೋರಖ್ ಪುರ ಆಸ್ಪತ್ರೆ ದುರಂತ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ!

Srinivasamurthy VN

ಲಖನೌ: ಸುಮಾರು 71 ಮಕ್ಕಳ ಸಾವಿಗೆ ಕಾರಣವಾದ ಗೋರಖ್ ಪುರ ಆಸ್ಪತ್ರೆ ದುರಂತ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಬುಧವಾರ ಅಲಹಾಬಾದ್ ಹೈಕೋರ್ಟ್ನಲ್ಲಿ  ವಕೀಲರಾದ ಸುನಿತಾ ಶರ್ಮಾ, ಸಾಮಾಜಿಕ ಕಾರ್ಯಕರ್ತರಾದ ಕಮಲೇಶ್ ಸಿಂಗ್ ಅವರು ಪಿಐಎಲ್ ಸಲ್ಲಿಕೆ ಮಾಡಿದ್ದು, ಅರ್ಜಿಯಲ್ಲಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯತನದಿಂದಲೇ 71ಕ್ಕೂ  ಹೆಚ್ಚು ಅಮಾಯಕ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಅಂತೆಯೇ ಮೆದುಳು ಸೋಂಕಿಗೆ ಕಳೆದ ಹಲವು ವರ್ಷಗಳಿಂದ ನೂರಾರು ಮಕ್ಕಳು ಸಾವನ್ನಪ್ಪುತ್ತಿದ್ದು, ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ. ರಾಜ್ಯ  ಆರೋಗ್ಯ ಇಲಾಖೆ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದು, ಈ ಬಗ್ಗೆಯೂ ನ್ಯಾಯಾಲಯ ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.

ಇನ್ನು ಇದೇ ಪ್ರಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುತ್ತಿರುವ ಅರ್ಜಿದಾರರ ಸಲಹೆಗಾರ ಸಂಸ್ಥೆಯ ಕೆಕೆ ರಾಯ್ ಅವರು, ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರದ ಮುಜುಗರಕ್ಕೆ  ಕಾರಣವಾಗಬಲ್ಲದು ಎಂಬ ಕಾರಣಕ್ಕೆ ಪ್ರಕರಣವನ್ನು ತಿರುಚುವ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ನಾವು ಪ್ರಕರಣವನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ದಶಕಗಳಿಂದಲಸೂ ಬಿಆರ್  ಡಿ ಆಸ್ಪತ್ರೆಯನ್ನು ಆಧುನೀಕರಿಸಿಲ್ಲ. ದಶಕಗಳಿಂದಲೂ ಈ ಆಸ್ಪತ್ರೆಯಲ್ಲಿ ಮಕ್ಕಳ ಸಾವನ್ನಪ್ಪುತ್ತಿದ್ದಾರೆ. ಇದೀಗ ಪ್ರಕರಣ ಬೆಳಕಿಗೆ ಬಂದಿಯಷ್ಟೇ. ಈಗಲಾದರೂ ಆಸ್ಪತ್ರೆಗೆ ಕಾಯಕಲ್ಪ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

SCROLL FOR NEXT