ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಇದೀಗ ಹಳೆ ಬಗೆಯ ಮುದ್ರಣಕ್ಕೆ ಹೊಸ ಟಚ್ ನೀಡಿದ್ದು ಬಣ್ಣ ಮತ್ತು ಗಾತ್ರವನ್ನು ತಗ್ಗಿಸಿ ಮುದ್ರಿಸುತ್ತಿದ್ದು ಇದೀಗ 2000 ಮತ್ತು 500 ರುಪಾಯಿ ಬಳಿಕ 50 ರುಪಾಯಿ ನೋಟಿನ ಮಾದರಿಯನ್ನು ಬಿಡುಗಡೆ ಮಾಡಿದೆ.
50 ಮತ್ತು 20 ರುಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಆರ್ಬಿಐ ಮುದ್ರಿಸುತ್ತಿದ್ದು ಇದರಲ್ಲಿ ಮೊದಲಿಗೆ 50 ರುಪಾಯಿ ಮುಖಬೆಲೆಯ ನೋಟಿನ ಮಾದರಿಯನ್ನು ಬಿಡುಗಡೆ ಮಾಡಿದೆ. ನೋಟಿನ ಮುಂಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರವಿದ್ದು ಹಿಂಬದಿಯಲ್ಲಿ ಐತಿಹಾಸಿಕ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿದೆ. ನೋಟಿನ ಮೇಲೆ ನೂತನ ಆರ್ಬಿಐ ಗರ್ವನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ನೂತನ 50 ರುಪಾಯಿ ನೋಟಿನ ಮಾದರಿ ಸೋರಿಕೆಯಾಗಿ ವೈರಲ್ ಆಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಆರ್ಬಿಐ ಬಿಡುಗಡೆ ಮಾಡಿರುವ ನೋಟು ಸಹ ಅದೇ ರೀತಿ ಇದೆ. ಆರ್ಬಿಐ ಬಿಡುಗಡೆ ಮಾಡಿರುವ ನೂತನ ನೋಟಿನ ಮಾದರಿಯನ್ನು ಸುದ್ದಿ ಸಂಸ್ಧೆ ಎಎನ್ಐ ಟ್ವೀಟ್ ಮಾಡಿದೆ.