ತಿರುವನಂತಪುರಂ: ಎಂಟು ತಿಂಗಳು ರಜೆ ಮೇಲೆ ತೆರಳಿದರೂ ಸಂಪೂರ್ಣ ಸಂಭಾವನೆ ಪಡೆಯುವುದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಕೇರಳ ಮಾಜಿ ಪೊಲೀಸ್ ಮುಖ್ಯಸ್ಥ ಟಿಪಿ ಸೇನ್ ಕುಮಾರ್ ಅವರ ವಿರುದ್ಧ ಶನಿವಾರ ಹೊಸ ಎಫ್ಐಆರ್ ದಾಖಲಿಸಿದ್ದಾರೆ.
ಸೇನ್ ಕುಮಾರ್ ಅವರು ವೈದ್ಯಕೀಯ ದಾಖಲೆ ಮತ್ತು ವೈದ್ಯರ ಪ್ರಿಸ್ಕ್ರಿಪಸನ್ ಗಳನ್ನು ನಕಲಿ ಮಾಡಿ ರಜಾ ಅವಧಿಯ ಸಂಪೂರ್ಣ ಸಂಬಳ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಎಂಟು ತಿಂಗಳು ರಜೆಯಲ್ಲಿದ್ದಾಗ ಸರ್ಕಾರಿಂದ 8 ಲಕ್ಷ ರುಪಾಯಿ ವೇತನ ಪಡೆದಿದ್ದಾರೆ ಎಂದು ದೂರಲಾಗಿದೆ.
ಸೇನ್ ಕುಮಾರ್ ಅವರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇನ್ ಗವರ್ನನ್ಸ್ (ಐಎಂಜಿ) ಮಹಾ ನಿರ್ದೇಶಕರಾಗಿದ್ದ ವೇಳೆ ಎಂಟು ತಿಂಗಳು ರಜೆ ತೆಗೆದುಕೊಂಡಿದ್ದರು. ಎಂಟು ತಿಂಗಳ ನಂತರ ಪುನಾ ಕೆಲಸಕ್ಕೆ ಹಾಜರಾಗಿದ್ದ ಸೇನ್ ಕುಮಾರ್ ತಾವು ವೈದ್ಯಕೀಯ ಚಿಕಿತ್ಸೆಗಾಗಿ ರಜೆ ತೆಗೆದುಕೊಂಡಿರುವುದಾಗಿ ಸರ್ಕಾರಕ್ಕೆ ತಿಳಿಸಿದ್ದರು. ಆದರೆ ಅವರ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿದ ಜಾಗೃತ ದಳ, ಸೇನ್ ಕುಮಾರ್ ಅವರು ಆಯುರ್ವೇದ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಬದಲು ಇತರೆ ಸ್ಥಳಗಳಲ್ಲಿ ವಾಸಿಸುತ್ತಿರುವುದನ್ನು ಪತ್ತೆ ಹಚ್ಚಿತ್ತು.
ಕಳೆದ ವರ್ಷ ಜೂನ್ ನಲ್ಲಿ ಎಲ್ ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೇನ್ ಕುಮಾರ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹುದ್ದೆಯಿಂದ ತೆಗೆದು ಹಾಕಿತ್ತು. ಬಳಿಕ ಜೂನ್ 7ರಿಂದ ವೈಯಕ್ತಿಕ ಕಾರಣ ನೀಡಿ ರಜೆ ಮೇಲೆ ತೆರಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ನಳನಿ ನೇಟೊ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಪೊಲೀಸ್ ತನಿಖೆಗೆ ಸೂಚನೆ ನೀಡಲಾಗಿದೆ.