ಲಖನೌ: ಉತ್ತರ ಪ್ರದೇಶದ ಮುಜಾಫರ್ ನಗರದ ಬಳಿ ಪುರಿ-ಹರಿದ್ವಾರ-ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು ಶನಿವಾರ ಹಳಿ ತಪ್ಪಿದ್ದು, ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಮತ್ತು 70ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಒಡಿಶಾದ ಪುರಿಯಿಂದ ಉತ್ತರಖಂಡ್ ನ ಹರಿದ್ವಾರಕ್ಕೆ ತೆರಳುತ್ತಿದ್ದ ರೈಲು ಇಂದು ಸಂಜೆ 5.45ರ ಸುಮಾರಿಗೆ ಮುಜಾಫರ್ ನಗರ ಜಿಲ್ಲೆಯ ಖತೌಲಿ ರೈಲ್ವೆ ನಿಲ್ದಾಣದ ಸಮೀಪ ಹಳಿ ತಪ್ಪಿದ್ದು, ಘಟನೆಯಲ್ಲಿ ಕೆಲವು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.
ಮೂಲಗಳ ಪ್ರಕಾರ, ಹಳಿ ತಪ್ಪಿದ ಕೆಲವು ಬೋಗಿಗಳು ಪಕ್ಕದ ಮನೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರಿಗೆ ಮತ್ತು ಆಸ್ತಿ ಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎನ್ನಲಾಗಿದೆ.
ರೈಲ್ವೆ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ವೈದ್ಯಕೀಯ ತಂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.
ಗಾಯಾಳುಗಳನ್ನು ಮೀರತ್, ಸಹರನಾಪುರ್ ಮತ್ತು ಇತರೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಟ್ವೀಟ್ ಮಾಡಿದ್ದಾರೆ.