ನವದೆಹಲಿ: ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತ ಪ್ರಕರಣ ಸಂಬಂಧ ಸೋಮವಾರದಿಂದ ತನಿಖೆ ಆರಂಭಿಸಲಾಗುತ್ತಿದ್ದು, ಉತ್ತರ ರೇಲ್ವೇ ಇಲಾಖೆ ಪ್ರಕರಣ ಸಂಬಂಧ ತನಿಖೆ ನಡೆಸಲಿದೆ ಎಂದು ರೈಲ್ವೇ ಟ್ರಾಫಿಕ್ ಮಂಡಳಿ ಸದಸ್ಯ ಮಹಮದ್ ಜೆಮ್ ಶೆಡ್ ಹೇಳಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಮ್ ಶೆಡ್ ಅವರು, ರೈಲು ದುರಂತ ನಿಜಕ್ಕೂ ದುರದೃಷ್ಟಕರ. ಪ್ರಕರಣದ ತನಿಖೆಗೆ ಆದೇಶಿಸಲಾಗಿದ್ದು, ಉತ್ತರ ವಲಯದ ರೈಲ್ವೇ ಇಲಾಖೆ ನಾಳೆಯಿಂದ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪುಗಳು ಕಂಡುಬಂದಿದ್ದರೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತೆಯೇ ರೈಲ್ವೇ ಸುರಕ್ಷತಾ ಕ್ರಮಗಳನ್ನು ಪಾಲಿಸದ ಸಿಬ್ಬಂದಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ದುರಂತದಲ್ಲಿ ಸಾವನ್ನಪ್ಪಿದವರ ಕುರಿತು ಅಧಿಕೃತ ಮಾಹಿತಿ ನೀಡಿದ ಅವರು, ದುರಂತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 92 ಮಂದಿ ಗಾಯಗೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಘಟನೆ ಸಂಬಂಧ ಸಣ್ಣ ಸಣ್ಣ ಸಾಕ್ಷ್ಯಾಧಾರಗಳನ್ನೂ ಕೂಡ ಬಿಡದೇ ಸಂಗ್ರಹಿಸಲಾಗುತ್ತಿದೆ. ಅಂತೆಯೇ ಪ್ರತೀ ದಿನ ರೈಲು ಹಳಿ ಪರೀಕ್ಷೆ ನಡೆಸಲಾಗುತ್ತಿತ್ತು. ಈ ದುರಂತಕ್ಕೂ ಮೊದಲು ಹಳಿ ತಪಾಸಣೆ ನಡೆದಿತ್ತೇ ಎಂಬುದು ತಿಳಿಯಬೇಕಿದೆ. ಇದೇ ಕಾರಣಕ್ಕೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ಇಲಾಖೆ ಪರಿಹಾರ ಘೋಷಣೆ ಮಾಡಿದ್ದು, ಗಾಯಾಳುಗಳಿಗೆ ಇಲಾಖೆಯಿಂದಲೇ ವೈದ್ಯಕೀಯ ವೆಚ್ಚ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಪ್ರಕರಣ ಸಂಬಂಧ ಈಗಾಗಲೇ ಓರ್ವ ಶಂಕಿತ ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.