ದೇಶ

ನಾಗರಿಕರ ಅಭಿವೃದ್ಧಿಗೆ ಬೆಳವಣಿಗೆ ಮತ್ತು ಉತ್ತಮ ಆಡಳಿತ ಅತ್ಯಗತ್ಯ: ಪ್ರಧಾನಿ ನರೇಂದ್ರ ಮೋದಿ

Sumana Upadhyaya
ಮಥುರಾ(ಉತ್ತರ ಪ್ರದೇಶ): ದೇಶದ ನಾಗರಿಕರ ಅಭಿವೃದ್ಧಿ ಮತ್ತು ಸಂತೃಪ್ತಿಗೆ ಬೆಳವಣಿಗೆ ಮತ್ತು ಉತ್ತಮ ಆಡಳಿತದ ಸಂಯೋಜನೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ಭಾರತ ಸರ್ಕಾರದ 70ಕ್ಕೂ ಅಧಿಕ ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳನ್ನುದ್ದೇಶಿಸಿ ಮಾತನಾಡಿದರು.
ಅಧಿಕಾರಿಗಳೊಂದಿಗೆ 5 ಸಂವಾದ ಕಾರ್ಯಕ್ರಮದಲ್ಲಿ ಮೊದಲ ಸಂವಾದವನ್ನುದ್ದೇಸಿಸಿ ಇಂದು ಮಾತನಾಡಿದ ಪ್ರಧಾನಿ, ಉತ್ತಮ ಆಡಳಿತ ಅಧಿಕಾರಿಗಳಿಗೆ ಮುಖ್ಯವಾಗಿರುತ್ತದೆ. ಸರ್ಕಾರದ ಎಲ್ಲಾ ಇಲಾಖೆಗಳು, ವಿಭಾಗಗಳು ಸಾಮರಸ್ಯದಿಂದ ಕೆಲಸ ಮಾಡಬೇಕು. ಉತ್ತಮ ಫಲಿತಾಂಶ ಸಾಧಿಸಲು ಪರಸ್ಪರ ಸಹಭಾಗಿತ್ವ ಬೇಕಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲಾ ಅಧಿಕಾರಿಗಳು ಬಡಜನರು ಮತ್ತು ಸಾಮಾನ್ಯ ಜನರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಇಂದು ವಿಶ್ವವೇ ಭಾರತದ ಬಗ್ಗೆ ಅಪಾರ ಧನಾತ್ಮಕ ನಿರೀಕ್ಷೆಯನ್ನಿಟ್ಟುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಸಮತೋಲನ ಸಾಧಿಸಲು ಯಶಸ್ವಿ ಭಾರತ ಮುಖ್ಯವಾಗಿದೆ ಎಂದು ಇಡೀ ವಿಶ್ವವೇ ಭಾವಿಸುತ್ತದೆ ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ದಕ್ಷತೆಯ ಹೊಂದಾಣಿಕೆ, ಸಾಮರಸ್ಯ ಮತ್ತು ಸಂವಹನ ಮುಖ್ಯವಾಗಿರುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ಅಗತ್ಯವಿರುವಲ್ಲಿ ವೇಗ ಮತ್ತು ದಕ್ಷತೆ ಮುಖ್ಯ. ಅಧಿಕಾರಿಗಳು ಉತ್ತಮ ಉದ್ದೇಶದಿಂದ ಪ್ರಾಮಾಣಿಕ ನಿರ್ಧಾರ ತೆಗೆದುಕೊಳ್ಳುವುದನ್ನು ಕೇಂದ್ರ ಸರ್ಕಾರ ಯಾವಾಗಲೂ ಪ್ರೋತ್ಸಾಹಿಸುತ್ತದೆ ಎಂದು ಪ್ರಧಾನಿ ಹೇಳಿದರು.
ದೇಶದ 100 ಅತಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ವಿವಿಧ ಅಭಿವೃದ್ಧಿ ನಿಯತಾಂಕಗಳಲ್ಲಿ ಆ ಜಿಲ್ಲೆಗಳನ್ನು ರಾಷ್ಟ್ರೀಯ ಮಟ್ಟಕ್ಕೆ ತರಬಹುದೆಂದು ಅವರು ಹೇಳಿದರು.
SCROLL FOR NEXT