ದೇಶ

ಭಯೋತ್ಪಾದನೆಗೆ ಆರ್ಥಿಕ ನೆರವು: ಗಿಲಾನಿ ಪುತ್ರರನ್ನು ಮತ್ತೆ ವಿಚಾರಣೆಗೊಳಪಡಿಸಿದ ಎನ್ಐಎ

Manjula VN
ನವದೆಹಲಿ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹುರಿಯತ್ ಮುಖ್ಯಸ್ಥ ಸೈಯದ್ ಅಲಿ ಶಾ ಗಿಲಾನಿಯವರ ಇಬ್ಬರು ಪುತ್ರರನ್ನು ಮತ್ತೆ ವಿಚಾರಣೆಗೊಳಪಡಿಸಿದ್ದಾರೆ. 
ನಯೀಮ್ ಮತ್ತು ನಸೀಮ್ ಗಿಲಾನಿಯವರ ಇಬ್ಬರು ಪುತ್ರರಾಗಿದ್ದು, ನಿನ್ನೆ ಇಬ್ಬರನ್ನೂ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಆಗಸ್ಟ್ 8 ರಂದು ಎನ್ಐಎ ಅಧಿಕಾರಿಗಳು ಗಿಲಾನಿಯವರ ಇಬ್ಬರೂ ಪುತ್ರರನ್ನು ವಿಚಾರಣೆ ನಡೆಸಿದ್ದರು. ಇದೀಗ ಪ್ರಕರಣ ಸಂಬಂಧ ಮತ್ತೆ ವಿಚಾರಣೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ನಯೀಮ್ ಗಿಲಾನಿಯವರ ಹಿರಿಯ ಪುತ್ರನಾಗಿದ್ದು, ವೃತ್ತಿಯಲ್ಲಿ ಸರ್ಜನ್ ಆಗಿದ್ದಾರೆ, ನಸೀಮ್ ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಉದ್ಯೋಗಿಯಾಗಿದ್ದಾರೆ. 
ಗಿಲಾನಿ ಪುತ್ರರನ್ನು ವಿಚಾರಣೆಗೊಳಪಡಿಸಿರುವ ಕುರಿತಂತೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 
ಮೂಲಗಳ ಪ್ರಕಾರ ವಿಚಾರಣೆ ವೇಳೆ, ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳಿಗೆ ದೊರಕಿರುವ ಸಾಕ್ಷ್ಯಾಧಾರಗಳಲ್ಲಿ ಹಣಕಾಸು ವರ್ಗಾವಣೆಯಾಗಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ನಯೀಮ್ ಹಾಗೂ ನಸೀಮ್ ಅವರಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT