ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ (ಸಂಗ್ರಹ ಚಿತ್ರ)
ಪಂಚಕುಲ (ಹರಿಯಾಣ): ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಜೈಲಿನಲ್ಲಿ ಯಾವುದೇ ರೀತಿಯ 'ವಿಶೇಷ ಸೌಲಭ್ಯ'ಗಳನ್ನು ನೀಡಲಾಗುವುದಿಲ್ಲ ಎಂದು ಕಾರಾಗೃಹದ ಡಿಜಿ ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರಾಮ್ ರಹೀಮ್ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪಂಚಕುಲ ಕಾರಾಗೃಹದ ಡಿಜಿ ಕೆ.ಪಿ. ಸಿಂಗ್ ಅವರು ಸ್ಪಷ್ಟನೆ ನೀಡಿದ್ದಾರೆ.
ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ರೊಹ್ಟಕ್ ನ ಸೊನಾರಿಯಾ ಜಿಲ್ಲಾ ಜೈಲಿನಲ್ಲಿಯೇ ಬಂಧಿಸಿಡಲಾಗಿದೆ. ಹರಿಯಾಣ ಜೈಲು ರೀತಿಯಲ್ಲಿಯೇ ಎಲ್ಲಾ ಕೈದಿಗಳಂತೆಯೇ ಅವರನ್ನೂ ನೋಡಿಕೊಳ್ಳಲಾಗುತ್ತಿದೆ. ರಾಮ್ ರಹೀಮ್ ಅವರಿಗೆ ಯಾವುದೇ ರೀತಿಯ ವಿಶೇಷ ಆತಿಥ್ಯವಾಗಲೀ, ಸೌಲಭ್ಯಗಳನ್ನಾಗಲೀ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ರಾಮ್ ರಹೀಮ್ ಇರುವ ಕಾರಾಗೃಹದ ಕೊಠಡಿಯಲ್ಲಿ ಎಸಿ ಸೌಲಭ್ಯವನ್ನು ನೀಡಿಲ್ಲ. ಜೈಲಿನ ನಿಯಮದಂತೆಯೇ ಒಂದು ಕೊಠಡಿಯಲ್ಲಿ ಇಬ್ಬರು ಕೈದಿಗಳನ್ನು ಇರಿಸಲಾಗುತ್ತದೆ. ರಾಮ್ ರಹೀಮ್ ಇರುವ ಕೊಠಡಿಯಲ್ಲಿಯೂ ಇಬ್ಬರು ಕೈದಿಗಳಿದ್ದಾರೆಂದು ತಿಳಿಸಿದ್ದಾರೆ.
ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಇಲ್ಲಸಲ್ಲದ ಮಾಹಿತಿಗಳನ್ನು ಹಾಗೂ ವರದಿಗಳನ್ನು ಪ್ರಕಟಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
2002ರಲ್ಲಿ ಗುರ್ತಿಮ್ ರಾಮ್ ರಹೀಮ್ ಅವರ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣ ಸಂಬಂಧ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿತ್ತು. ಪ್ರಕರಣದಲ್ಲಿ ದೇವಮಾನವ ರಾಮ್ ರಹೀಮ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.
ನ್ಯಾಯಾಲಯದ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಹರಿಯಾಣ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ಈ ವರೆಗೂ 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ.