ದೇಶ

ರಾಜ್ಯಸಭಾ ಸದಸ್ಯರಾಗಿ ಅಹ್ಮದ್ ಪಟೇಲ್ ಪ್ರಮಾಣ ವಚನ ಸ್ವೀಕಾರ

Manjula VN
ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 
ರಾಜಧಾನಿ ದೆಹಲಿಯಲ್ಲಿ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು, ಅಹ್ಮದ್ ಪಟೇಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಕಾಂಗ್ರೆಸ್ ಪಕ್ಷದ ಇನ್ನಿತರೆ ನಾಯಕರು ಹಾಜರಿದ್ದರು. 
ರಾಜಕೀಯದಾಟದಲ್ಲಿ ಅಹ್ಮದ್ ಪಟೇಲ್ ಅವರನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದ ಆಡಳಿತಾರೂಢ ಬಿಜೆಪಿ ಪಕ್ಷವು, ರಾಜ್ಯಸಭಾ ಚುನಾವಣೆಯಲ್ಲಿ ಪಟೇಲ್ ವಿರುದ್ಧ ಇತ್ತಿಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಬಲವಂತಸಿನ್ಹ ರಜಪೂತ್ ಅವರನ್ನು ಕಣಕ್ಕಿಳಿಸಿತ್ತು. ಅಹ್ಮದ್ ಪಟೇಲ್ ಅವರನ್ನು ಹೇಗಾದಲೂ ಮಾಡಿ ಸೋಲಿಸಬೇಕೆಂದು ನಿರ್ಧರಿಸಿದ್ದ ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಖರೀದಿಸುವ ತಂತ್ರಗಾರಿಕೆಗೆ ಕೈಹಾಕಿತ್ತೆಂಬ ವದಂತಿಗಳೂ ಹರಡಿದ್ದವು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಎಲ್ಲಾ 44 ಶಾಸಕರನ್ನು ಬೆಂಗಳೂರಿಗೆ ಹೈಜಾಕ್ ಮಾಡಿ ಕರೆತರಲಾಗಿತ್ತು. ರಾಜ್ಯಸಭೆ ಚುನಾವಣೆಯ ಮುನ್ನಾದಿನ ಎಲ್ಲಾ ಶಾಸಕರು ಗುಜರಾತ್ ರಾಜ್ಯಕ್ಕೆ ವಾಪಸ್ಸಾಗಿದ್ದರು. 
ಬಿಜೆಪಿಗೆ ಮರುಳಾಗಿದ್ದ ಕಾಂಗ್ರೆಸ್'ನ ಇಬ್ಬರು ಶಾಸಕರಾದ ಬೋಲಾ ಭಾಯಿ ಗೋಗಿಲ್, ರಾಘವ್ ಭಾಯಿ ಪಟೇಲ್ ಅವರು ಅಂತಿಮ ಕ್ಷಣದಲ್ಲಿ ಅಡ್ಡಮತದಾನ ಹಾಕಿ ಅಹ್ಮದ್ ಪಟೇಲ್ ಅವರಿಗೆ ಕೊನೇ ಕ್ಷಣದಲ್ಲಿ ಕೈಗೊಟ್ಟರೂ, ಕೇಂದ್ರ ಚುನಾವಣಾ ಆಯೋಗವು ಅವರ ಮತಗಳನ್ನು ಅಸಿಂಧುಗೊಳಿಸಿದ್ದರಿಂದಾಗಿ ಅಹ್ಮದ್ ಪಟೇಲ್ ಅವರಿಗೆ ಗೆಲುವು ದೊರಕಿತ್ತು. 
SCROLL FOR NEXT