ದೇಶ

9ನೇ ಬ್ರಿಕ್ಸ್ ಸಮಾವೇಶ: ಪ್ರಧಾನಿ ಮೋದಿ ಚೀನಾ ಭೇಟಿ 'ರಾಜತಾಂತ್ರಿಕ ಗೆಲುವು': ರಕ್ಷಣಾ ತಜ್ಞರು

Manjula VN
ನವದೆಹಲಿ: 9ನೇ ಬ್ರಿಕ್ಸ್ ಸಮಾವೇಶ ಹಿನ್ನಲೆಯಲ್ಲಿ ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡುತ್ತಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವಾಗಿದೆ ಎಂದು ರಕ್ಷಣಾ ತಜ್ಞರು ಬುಧವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಪ್ರಧಾನಿ ಮೋದಿಯವರು ಚೀನಾಗೆ ಭೇಟಿ ನೀಡುತ್ತಿರುವುದು ಕೇವಲ ಆಕರ್ಷಣೆಯಷ್ಟೇ ಅಲ್ಲ, ಭಾರತವನ್ನು ಉತ್ತುಂಗಕ್ಕೆ ಏರಿಸಿದೆ. ಡೋಕ್ಲಾಮ್ ವಿವಾದ ಭಾರತ ಹಾಗೂ ಚೀನಾ ನಡುವೆ ಪ್ರಕ್ಷುಬ್ದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಬ್ರಿಕ್ಸ್ ಸಮಾವೇಶ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಹಾಗೂ ಮೋದಿಯವರು ಭೇಟಿ ಮಾಡಿ ಮಾತುಕತೆ ನಡೆಸಲು ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. 
ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಭಾರತೀಯ ಮಾಧ್ಯಮಗಳು ತೋರಿರುವ ಸಹನೆ, ತಾಳ್ಮೆ ಶ್ಲಾಘಿಸುವಂತಹದ್ದು. ಭಾರತದ ಈ ಸಹನೆಗೆ ಇಡೀ ವಿಶ್ವವೇ ಪ್ರಭಾವಿತಗೊಂಡಿದೆ. ಡೋಕ್ಲಾಮ್ ವಿವಾದ ಸಂಬಂಧ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕವೇ ಚೀನಾಗೆ ಸಾಕಷ್ಟು ಸ್ಪಷ್ಟನೆಗಳನ್ನು ನೀಡಿತ್ತು. ವಿವಾದ ಮುಂದುವರೆದಿದ್ದೇ ಆಗಿದ್ದರೆ ಪ್ರಧಾನಿ ಮೋದಿಯವರು ಚೀನಾಗೆ ಭೇಟಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಪ್ರಧಾನಿ ಮೋದಿಯವರು ಚೀನಾಗೆ ಭೇಟಿ ನೀಡುತ್ತಿರುವುದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಗೆಲುವಾಗಿದೆ. ಭಾರತದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ. 
ಡೋಕ್ಲಾಮ್ ವಿವಾದ ಸಂಬಂಧ ಚೀನಾ ಪ್ರದರ್ಶಿಸಿದ್ದ ವರ್ತನೆ ಮೂರ್ಖತನ ಹಾಗೂ ಅಪ್ರಬುದ್ಧತೆಯಿಂದ ಕೂಡಿತ್ತು. ವಿಶ್ವದ ಅತ್ಯಂತ ಹಳೆಯ ನಾಗರೀಕತೆಯನ್ನು ಹೊಂದಿರುವ ಒಂದು ರಾಷ್ಟ್ರವಾಗಿರುವ ಚೀನಾ ಅಪ್ರಬುದ್ಧತೆಯನ್ನು ಪ್ರದರ್ಶಿಸಿತ್ತು. ಇದು ಭಾರತಕ್ಕೆ ಸಿಕ್ಕ ದೊಡ್ಡ ಜಯವಾಗಿದೆ ಎಂದಿದ್ದಾರೆ. 
73 ದಿನಗಳ ಡೋಕ್ಲಾಮ್ ವಿವಾದ ಬಗೆಹರಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಬ್ರಿಕ್ಸ್' ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸೆ.3 ರಿಂದ 5ರವರೆಗೆ ಚೀನಾ ಯಾತ್ರೆ ಕೈಗೊಳ್ಳಲಿದ್ದಾರೆ.  
SCROLL FOR NEXT