ಚಂಡೀಗಢ: ಹಿಮಾಚಲ ಪ್ರದೇಶದ ಕೊತ್ಖಾಯಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿಪಿ, ಡಿಎಎಸ್ಪಿ ಹಾಗೂ ಆರು ಮಂದಿ ಉನ್ನತಾಧಿಕಾರಿಗಳನ್ನು ಸಿಬಿಐ ಬಂಧನಕ್ಕೊಳಪಡಿಸಿದೆ ಎಂದು ಬುಧವಾರ ತಿಳಿದುಬಂದಿದೆ.
ದಕ್ಷಿಣ ವಲಯ ಐಜಿಪಿ ಹಾಗೂ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ತಂಡದ ಮುಖ್ಯಸ್ಥ ಝಹೂರ್ ಹೆಚ್. ಝೈದಿ ಅವರನ್ನು ಶಿಮ್ಲಾದಲ್ಲಿ ಬಂಧನಕ್ಕೊಳಪಡಿಸಿದೆ ಎಂದು ವರದಿಗಳು ತಿಳಿಸಿವೆ.
ಜೊತೆಗೆ ಡಿಎಸ್ಪಿ ಥಿಯಾಂಗ್ ಮನೋಜ್ ಜೋಶಿ ಹಾಗೂ ಕೊತ್'ಖಾಯ್ ಠಾಣೆಯ ಮುಖ್ಯಸ್ಥ ರಾಜೇಂದ್ರ ಸಿಂಗ್, ಎಎಸ್ಐ ದೀಪ್ ಚಂದ್ ಶರ್ಮಾ, ಮುಖ್ಯಪೇದೆ ಸೂರತ್ ಸಿಂಗ್, ಮೋಹನ್ ಲಾಲ್, ರಫೀಕ್ ಅಲಿ ಹಾಗೂ ಪೇದೆ ರಂಜಿತ್ ಸಿಂಗ್ ಇತರರು ಬಂಧನಕ್ಕೊಳಗಾಗಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಜು.20ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದ. ರಾಜೇಂದ್ರ ಸಿಂಗ್, ಸೂರಜ್ ಎಂಬ ನೇಪಾಳಿ ಕೂಲಿಯಾಗಿದ್ದು, ಪ್ರಕರಣದ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ಆತನ ತಲೆಗೆ ಹೊಡೆದು ಸಾಯಿಸಿದ್ದರು ಎಂದು ಹೇಳಲಾಗುತ್ತಿತ್ತು.
ಜು.4 ರಂದು 16 ವರ್ಷದ 10ನೇ ತರಗತಿಯ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. 2 ದಿನ ಬಳಿಕ ಆಕೆಯ ಶವ ಹಲೈಲಾ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಶಾಲೆಯಿಂದ ಮನೆಗೆ ಬರುವಾಲ ಲಿಫ್ಟ್ ಕೊಡುವ ನೆಪದಲ್ಲಿ ಆರೋಪಿಗಳು ಆಕೆಯನ್ನು ಕರೆದೊಯ್ಡು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು.
ಪ್ರಕರಣ ಸಂಬಂಧದ ತನಿಖೆಗಾಗಿ ಅಲ್ಲಿನ ಸರ್ಕಾರ ಎಸ್ಐಟಿ ತಂಡವನ್ನು ರಚನೆ ಮಾಡಿತ್ತು. ಇದರಂತೆ ತನಿಖೆ ಆರಂಭಿಸಿದ್ದ ಅಧಿಕಾರಿಗಳು ಆಶಿಕ್ ಚೌಹಾಣ್ (29), ರಾಜೇಂದ್ರ ಸಿಂಗ್ (32), ಸುಭಾಷ್ ಸಿಂಗ್ ಭಿಷ್ತ್ (42), ಲೋಕ್ ಜನ್ (19), ಸೂರಜ್ ಸಿಂಗ್ (29) ಮತ್ತು ದೀಪಕ್ (38) ಎಂಬ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು.