ರಾಬರ್ಟ್ ವಾದ್ರಾ(ಸಂಗ್ರಹ ಚಿತ್ರ)
ಜೈಪುರ: ಬಿಕನೇರ್ ನ ಅಕ್ರಮ ಭೂ ಹಗರಣ ಕೇಸಿಗೆ ಸಂಬಂಧಪಟ್ಟಂತೆ 18 ಕೇಸುಗಳನ್ನು ಸಿಬಿಐ ಮರು ದಾಖಲೆ ಮಾಡಿಕೊಂಡಿದೆ. ಅವುಗಳಲ್ಲಿ ನಾಲ್ಕು ಕೇಸುಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧವಾಗಿವೆ.
ತನಿಖಾ ಸಂಸ್ಥೆ ದಾಖಲಿಸಿರುವ 18 ಎಫ್ಐಆರ್ ಗಳಲ್ಲಿ 16 ಕೇಸುಗಳು ಗಜ್ನೆರ್ ಪೊಲೀಸ್ ಠಾಣೆಯಲ್ಲಿ ಮತ್ತು ಎರಡು ಕೇಸುಗಳು ಬಿಕನೇರ್ ನ ಕೊಲಾಯತ್ ಪೊಲೀಸ್ ಠಾಣೆಯಲ್ಲಿ 2014ರ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ದಾಖಲಾದ ಕೇಸುಗಳಾಗಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಕನೇರ್ ಭೂ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಕಳೆದ ವಾರ ರಾಜಸ್ತಾನ ಸರ್ಕಾರ, ಸಿಬಿಐ ತನಿಖೆ ಆರಂಭಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿತ್ತು. ರಾಜಸ್ತಾನದ ಬಿಕನೇರ್ ನಲ್ಲಿ 55 ಎಕರೆ ಭೂಮಿಯ ಮಾರಾಟ ಮತ್ತು ಖರೀದಿಯಲ್ಲಿ ಅಕ್ರಮವಾಗಿ ವಾದ್ರಾ ಅವರಿಗೆ ಸೇರಿದ ಕಂಪೆನಿ ಭಾಗಿಯಾಗಿದೆ ಎಂಬ ಆರೋಪವಿದೆ.
ಮಹಾಜನ್ ಫೈರಿಂಗ್ ರೇಂಜ್ ಗೆ ಬದಲಾಗಿ ಪರಿಹಾರವಾಗಿ ಈ ಭೂಮಿಯನ್ನು ನೀಡಲಾಗಿತ್ತು. ಆದರೂ ಫಲಾನುಭವಿಗಳಿಗೆ ಭೂಮಿ ಸಿಕ್ಕಿರಲಿಲ್ಲ. ಬದಲಾಗಿ ಫಲಾನುಭವಿಗಳಲ್ಲದ ವ್ಯಕ್ತಿಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.