ಚೆನ್ನೈ ನೂತನ ದಂಪತಿ ಮೇಲೆ ಗುಂಡು ಹಾರಿಸಿದ್ದ ಹೆದ್ದಾರಿ ದರೋಡೆಕೋರನ ಬಂಧನ
ಸುಮಾರು ಎರಡೂವರೆ ತಿಂಗಳ ಹಿಂದೆ ಚೆನ್ನೈ ದಂಪತಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಇಬ್ಬರು ಮುಸುಕುದಾರಿ ಬೈಕ್...
ಚೆನ್ನೈ: ಸುಮಾರು ಎರಡೂವರೆ ತಿಂಗಳ ಹಿಂದೆ ಚೆನ್ನೈ ದಂಪತಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಇಬ್ಬರು ಮುಸುಕುದಾರಿ ಬೈಕ್ ಸವಾರರ ಪೈಕಿ ಓರ್ವನನ್ನು ಶುಕ್ರವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ದಂಪತಿಗಳ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ 37 ವರ್ಷದ ಅಮ್ಜದ್ ನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಮುಜಾಫರ್ ನಗರದ ತನ್ವಿರ್ ನನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಮುಜಾಫರ್ ನಗರ ನಯಿ ಮಂಡಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮನಿಲಾಲ್ ಪಟಿದಾರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳು ಕುಖ್ಯಾತ ಹೆದ್ದಾರಿ ದರೋಡೆಕೋರರಾಗಿದ್ದು, ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಲ್ಲಿ ಸಂಚರಿಸುವ ಜನರಿಗೆ ಗನ್ ಮತ್ತು ಚಾಕು ತೋರಿಸಿ ದರೋಡೆ ಮಾಡುತ್ತಾರೆ ಎಂದು ಪಟಿದಾರ್ ಅವರು ಹೇಳಿದ್ದಾರೆ.
ಕಳೆದ ಜೂನ್ 23ರಂದು ಹೊಸದಾಗಿ ಮದುವೆಯಾಗಿದ್ದ ಅದಿತ್ಯ ಕುಮಾರ್ ಮತ್ತು ವಿಜಯಲಕ್ಷ್ಮಿ ದಂಪತಿ ಮೇಲೆ ಅಮ್ಜದ್ ಮತ್ತು ತನ್ವಿರ್ ಗುಂಡು ಹಾರಿಸಿದ್ದರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆದಿತ್ಯ ಕುಮಾರ್ ಅವರು ಮೃತಪಟ್ಟಿದ್ದರು.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಇಂದು ಅಮ್ಜದ್ ನನ್ನು ಬಂಧಿಸಿದ್ದು, ಆರೋಪಿ ಎರಡು ಕೊಲೆ ಪ್ರಕರಣ ಸೇರಿದಂತೆ ಸುಮಾರು 25 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.