ಸುಪ್ರೀಂ ಕೋರ್ಟ್(ಸಂಗ್ರಹ ಚಿತ್ರ)
ನವದೆಹಲಿ: ಅಪ್ರಾಪ್ತ ಪತ್ನಿ ಜೊತೆಗೆ ಒತ್ತಾಯದ ಲೈಂಗಿಕ ಕ್ರಿಯೆ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉಚ್ಚ ನ್ಯಾಯಾಲಯ ಈ ಹಿಂದೆ, ಭಾರತೀಯ ದಂಡ ಸಂಹಿತೆ 375 ರ ಪ್ರಕಾರ 15 ವರ್ಷಕ್ಕಿಂತ ಕೆಳ ಹರೆಯದ ಪತ್ನಿ ಜೊತೆಗೆ ಪತಿ ಸಂಭೋಗ ಅಥವಾ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯ, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಕಾನೂನಿನಡಿಯಲ್ಲಿ ಮದುವೆ ಒಂದು ವಿನಾಯ್ತಿಯಲ್ಲ ಎಂದು ಹೇಳಿದೆ.
15ರಿಂದ 18 ವರ್ಷದೊಳಗಿನ ಪತ್ನಿ ಜೊತೆಗೆ ಶಾರೀರಿಕ ಸಂಬಂಧ ಹೊಂದಲು ಅವಕಾಶ ನೀಡುವ ಸಾಧ್ಯತೆಯ ಮೌಲ್ಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಹೀಗೆ ಹೇಳಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ದೇಶದ ಕೆಲ ಭಾಗಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಉಳಿದಿರುವುದಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ. ಈ ಸಂಗತಿ ನಮ್ಮ ಸಮಾಜದಲ್ಲಿ ಅನಿಷ್ಟವಾಗಿದ್ದು ಹೆಣ್ಣು ಮಕ್ಕಳ ಪೋಷಕರೇ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಖೇದಕರ ಎಂದು ಕೋರ್ಟ್ ವಿಷಾದ ವ್ಯಕ್ತಪಡಿಸಿದೆ.
ದೇಶದ ಅಲ್ಲಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಬಾಲ್ಯ ವಿವಾಹವನ್ನು ಅವರ ಪೋಷಕರೇ ಮಾಡುತ್ತಿರುವುದು ದುರದೃಷ್ಟಕರ ವಾಸ್ತವ ಸಂಗತಿ. ಇವುಗಳ ಮಧ್ಯೆ ಕೆಲವು ಕಡೆ ಅಪ್ರಾಪ್ತ ಬಾಲಕ, ಬಾಲಕಿಯರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂದು ನ್ಯಾಯಮೂರ್ತಿ ಎಂ.ಬಿ.ಲೊಕುರ್ ಮತ್ತು ದೀಪಕ್ ಗುಪ್ತ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.