ವಾಷಿಂಗ್ ಟನ್: ವಯಸ್ಸಾದವರು 5 ಗಂಟೆಗಿಂತ ಹೆಚ್ಚು ಟಿವಿ ವೀಕ್ಷಿಸುವುದು ಹಾಗೂ ಕಡಿಮೆ ಸಮಯ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಡೆದಾಡಲು ಸಮಸ್ಯೆ ಎದುರಿಸುವ ಅಪಾಯ ಇರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
ಅತಿ ಹೆಚ್ಚು ಸಮಯ ಟಿವಿ ವೀಕ್ಷಿಸುವುದು ವಯಸ್ಸಾದ ನಂತರ ಅಂಗವೈಕಲ್ಯಕ್ಕೆ ಕಾರಣವಾಗುವ ಅಪಾಯ ಹೆಚ್ಚಿದೆ, ಸಂಜೆ ವೇಳೆ ದೈಹಿಕ ಚಟುವಟಿಕೆಯೇ ಇಲ್ಲದೇ ಗಂಟೆಗಟ್ಟಲೆ ಟಿವಿ ವೀಕ್ಷಣೆಯಿಂದ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಎದುರಾಗುವ ಸಾಧ್ಯತೆ ಇದೆ ಎಂದು ವಾಷಿಂಗ್ ಟನ್ ವಿಶ್ವವಿದ್ಯಾನಿಲಯದ ಲೊರೆಟ್ಟಾ ಡಿಪಿಯೆಟ್ರೊ ಹೇಳಿದ್ದಾರೆ.
50-71 ವರ್ಷದ ವಯಸ್ಸಿನ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅಧ್ಯಯನ ಪ್ರಾರಂಭವಾದ ವೇಳೆ ಎಲ್ಲರೂ ಆರೋಗ್ಯವಂತರಾಗಿದ್ದರು, ನಂತರದ ದಿನಗಳಲ್ಲಿ ಪ್ರತಿಯೊಬ್ಬರೂ ಎಷ್ಟು ಸಮಯ ಟಿವಿ ವೀಕ್ಷಿಸುತ್ತಾರೆ ಎಂಬುದನ್ನು ಸಂಶೋಧಕರು ಸುಮಾರು 10 ವರ್ಷಗಳ ಕಾಲ ಗಮನಿಸಿದ್ದಾರೆ. ಸಮೀಕ್ಷೆ ಮುಕ್ತಾಯಗೊಳ್ಳುವ ವೇಳೆಗೆ ಶೇ.30 ರಷ್ಟು ಜನರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು, ಪ್ರಮುಖವಾಗಿ ನಡೆದಾಡುವ ಸಮಸ್ಯೆ ಎದುರಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.