ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್
ಪಂಚಕುಲ: 2005ರ ಬಳಿಕ ಡೇರಾ ಸಚ್ಚಾ ಸೌದದಲ್ಲಿ ಆತ್ಮಾಹುತಿ ದಳ ಸಕ್ರಿಯವಾಗಿದೆ ಎಂದು ಗುಪ್ತಚರ ಇಲಾಖೆ ಗುರುವಾರ ಎಚ್ಚರಿಕೆ ನೀಡಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಯೆಂದು ಸಾಬೀತಾದ ಬಳಿಕ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್'ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಳಿಕ ಆಶ್ರಮವನ್ನು ಪರಿಶೀಲನೆ ನಡೆಸಿದ್ದ ಅಧಿಕಾರಿಗಳಿಗೆ ಆತ್ಮಾಹುತಿ ದಳಗಳ ರಚನೆ ಕುರಿತು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಸಿರ್ಸಾದ ನಿವಾಸಿಯಾಗಿರುವ ಇಂದು ಎಂಬ ಮಹಿಳೆಯ ಸಹಿಯಿರುವ 2005ರ ಅಕ್ಟೋಬರ್ 20ರ ಛಾಪಾ ಕಾಗದದಲ್ಲಿ ಮುದ್ರಿತವಾಗಿರುವ ನೂರಾರು ಪತ್ರಿಗಳು ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಎಂಬ ಮಹಿಳೆ ಸಹಿ ಮಾಡಿರುವ ಕಾಗದದಲ್ಲಿ ಕೆಲ ನಿಯಮಗಳಿದ್ದು, ಮಾನವೀಯತೆಯ ಕಾರಣಕ್ಕೆ ನಾನು ನನ್ನ ಜೀವನವನ್ನು ಡೇರಾ ಸಚ್ಚಾ ಸೌದಕ್ಕೆ ಸಮರ್ಪಿಸುತ್ತಿದ್ದೇನೆ. ಅಪಘಾತವಾಗಲೀ ಅಥವಾ ಬೇರಾವುದೇ ಕಾರಣದಲ್ಲಿ ನಾನು ಸಾವನ್ನಪ್ಪಿದ್ದರೆ, ನನ್ನ ಸಾವಿಗೆ ಯಾರೂ ಜವಾಬ್ದಾರರಾಗಿರುವುದಿಲ್ಲ. ಡೇರಾ ಸಚ್ಚಾ ಸೌದ ಕೂಡ ನನ್ನ ಸಾವಿಗೆ ಕಾರಣವಾಗುವುದಿಲ್ಲ. ನನ್ನ ಸಾವಿಗೆ ಡೇರಾ ಸಚ್ಚಾ ಸೌದ ಎಂದು ಹೇಳಲು ನನ್ನ ಕುಟುಂಬದ ಸದಸ್ಯರಿಗೂ ಹಕ್ಕು ಇರುವುದಿಲ್ಲ ಎಂಬ ನಿಯಮಗಳಿರುವ ಪತ್ರಕ್ಕೆ ಅವರು ಸಹಿ ಮಾಡಿದ್ದಾರೆ.
ಇದೇ ರೀತಿ ನೂರಾರು ಸಂಖ್ಯೆಯಲ್ಲಿ ಡೇರಾ ಸಚ್ಚಾ ಸೌದದ ಬೆಂಬಲಿಗರು ಹಾಗೂ ಅನುಯಾಯಿಗಳು ಸಹಿ ಮಾಡಿರುವ ಕಾಗದಗಳು ಆಶ್ರಮದಲ್ಲಿ ದೊರಕಿವೆ ಎಂದು ತಿಳಿದುಬಂದಿದೆ.
ಸಮಾಜದಲ್ಲಿ ಅಶಾಂತಿಯನ್ನು ಹರಡಲು ಡೇರಾ ಸಚ್ಚಾ ಸೌದ 'ಆತ್ಮಾಹುತಿ ದಳ'ವನ್ನು ಸಿದ್ಧ ಪಡಿಸುತ್ತಿದೆ ಎಂಬುದು ಇದರಿಂದ ತಿಳಿದು ಬರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಮಾಜದಲ್ಲಿನ ಶಾಂತಿಯನ್ನು ಹಾಳು ಮಾಡಲು ಡೇರಾ ಸಚ್ಚಾ ಸೌದ ಸಿದ್ಧಗೊಳಿಸಿರುವ ದಳ ಯಾವುದೇ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧವಿದೆ ಎಂದು ಪೊಲೀಸ್ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ಡೇರಾ ಸಚ್ಚಾ ಸೌದ ಈಗಾಗಲೇ ತಯಾರು ಮಾಡಿರುವ ಈ ಆತ್ಮಾಹುತಿ ದಳ ಸಮಾಜದಲ್ಲಿ ಈಗಾಗಲೇ ಸಕ್ರಿಯಗೊಂಡಿವೆ ಎಂದು ಗುಪ್ತಚರ ದಳದ ಐಜಿ ಎ.ಕೆ. ರಾವ್ ಅವರು ಹೇಳಿದ್ದಾರೆ.