ಹೊಸದಿಲ್ಲಿ: 12 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ 64 ಕೋಟಿ ಮೊತ್ತದ ಬೋಫೋರ್ಸ್ ಹಗರಣ ವಿಚಾರಣೆಯನ್ನು ಅಕ್ಟೋಬರ್ ನಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
ಅಕ್ಟೋಬರ್ ಎರಡನೇ ವಾರದಲ್ಲಿ ಮುಖ್ಯ ನ್ಯಾಯಮೂರ್ತಿ ದಿಪಾಕ್ ಮಿಶ್ರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಬೋಫೋರ್ಸ್ ಪ್ರಕರಣದ ಅಂತಿಮ ವಿಚಾರಣೆ ನಡೆಸಲಿದೆ.
ವಿಚಾರಣೆಯ ಸಂದರ್ಭದಲ್ಲಿ, ಬೋಫೋರ್ಸ್ ನಲ್ಲಿ ಹಿಂದೂಜಾ ಸಹೋದರರನ್ನು ವಜಾಗೊಳಿಸುವ 2005 ರ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ವಕೀಲ ಅಜಯ್ ಅಗರ್ವಾಲ್ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸಬೇಕೆಂದು ಪೀಠಕ್ಕೆ ಕೇಳಿದರು.
ಬೊಫೋರ್ಸ್ ಕಿಕ್ ಬ್ಯಾಕ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಪುನಾರಂಭಿಸಲು ಬಿಜೆಪಿ ಸಂಸದರು ಸಂಸತ್ತಿನಲ್ಲಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ವಿಚಾರಣೆ ಮಹತ್ವ ಪಡೆದಿದೆ. ಸ್ವೀಡನ್ ನ ಮುಖ್ಯ ತನಿಖಾಧಿಕಾರಿ ಸ್ಟೆನ್ ಲಿಂಡ್ಸ್ಟ್ರೋಮ್ ಅವರು ಉನ್ನತ ಮಟ್ಟದಲ್ಲಿ ಲಂಚ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಹೈಕೋರ್ಟ್ ತೀರ್ಪಿನ ನಂತರ ಸಿಬಿಐ 90 ದಿನಗಳ ಕಾಲಾವಧಿಯೊಳಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಮುಂದಾಗಿದೆ.
ಭಾರತ ಮತ್ತು ಸ್ವೀಡಿಷ್ ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ಎಬಿ ಬೊಫೋರ್ಸ್ ನಡುವೆ ಭಾರತೀಯ ಸೇನೆಗೆ 155 ಎಂಎಂ ಸಾಮರ್ಥ್ಯದ 400 ಬಂದೂಕುಗಳನ್ನು ಪೂರೈಸಲು 1,437 ಕೋಟಿ ರೂ. ಮಾರ್ಚ್ 24, 1986 ರಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಆದರೆ ಈ ಬಂದೂಕು ಖರೀದಿಯಲ್ಲಿ ಭಾರತೀಯ ರಾಜಕಾರಣಿಗಳು ಮತ್ತು ರಕ್ಷಣಾ ಸಿಬ್ಬಂದಿಗೆ ಲಂಚ ನೀದಲಾಗಿದೆ ಎಂದು ಸ್ವೀಡಿಶ್ ರೇಡಿಯೊ ಸಂಸ್ಥೆ ವರದಿ ಪ್ರಸಾರ ಮಾಡಿತ್ತು. ಇದು ಕೇಂದ್ರದಲ್ಲಿ ಆಗ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿತ್ತು.