ನವದೆಹಲಿ: ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಕಾರ್ಯಾಚರಣೆಯಲ್ಲಿರುವ ಭಾರತದ ಏಕೈಕ ಪರಮಾಣು ಚಾಲಿತ ಜಲಾಂತರ್ಗಾಮಿ ಐಎನ್ ಎಸ್ ಚಕ್ರಾ ಹಾನಿಗೀಡಾಗಿದ್ದು, ಈ ಕುರಿತು ತನಿಖೆಯನ್ನು ಆರಂಭಿಸಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಸುನಿಲ್ ಲಾಂಬಾ ಅವರು ಶುಕ್ರವಾರ ತಿಳಿಸಿದರು.
ನೌಕಾಪಡೆ ಮೂಲಗಳ ಪ್ರಕಾರ ಐಎನ್ ಎಸ್ ಚಕ್ರಾ ಜಲಾಂತರ್ಗಾಮಿಯ ಸೋನಾರ್ ವ್ಯವಸ್ಥೆಗೆ ಗಂಭೀರ ಹಾನಿಯಾಗಿದೆ ಎಂದು ತಿಳಿದುಬಂದಿದ್ದು, ಇತ್ತೀಚಿನ ದಿನಗಳಲ್ಲಿ ಯಾವುದೇ ಯಾನವನ್ನು ನಡೆಸಿರದ ಐಎನ್‌ಎಸ್ ಚಕ್ರಾ ನೌಕೆಗೆ ಹಾನಿ ಹೇಗೆ ಸಂಭವಿಸಿತ್ತು ಎನ್ನುವುದನ್ನು ನೌಕಾಪಡೆಯು ಬಹಿರಂಗಗೊಳಿಸಿಲ್ಲ. ಅಕುಲಾ ವರ್ಗಕ್ಕೆ ಸೇರಿದ ಈ ಜಲಾಂತರ್ಗಾಮಿಯು ಸದ್ಯ ವಿಶಾಖಪಟ್ಟಣಂ ನಲ್ಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೌಕಾಪಡೆ ಮುಖ್ಯಸ್ಥ ಸುನಿಲ್ ಲಾಂಬಾ ಅವರು, ಐಎನ್‌ಎಸ್ ಚಕ್ರಾ ಸೋನಾರ್ ಗೆ ಹಾನಿಯಾಗಿದೆ. ಅದರ ಎರಡು ಪ್ಯಾನೆಲ್ ಗಳು ಕಳಚಿಕೊಂಡಿವೆ ಎಂದು ತಿಳಿಸಿದರು. ಸೋನಾರ್ ವ್ಯವಸ್ಥೆ ಹಾನಿಗೀಡಾಗಿರುವುದರಿಂದ ನೌಕೆಗೆ ಸಮುದ್ರದಲ್ಲಿ ಯಾವುದೇ ತರಂಗಗಳ ಶಬ್ದಗಳು ಕೇಳಿಸುವುದಿಲ್ಲ ಮತ್ತು ಯಾವುದೇ ರೀತಿಯ ಶಬ್ದಗಳನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಪ್ರಸ್ತುತ ಈ ಸೋನಾರ್ ವ್ಯವಸ್ಥೆ ಸರಿಹೋಗುವ ವರೆಗೂ ಅಂದರೆ ಸರಿ ಸುಮಾರು 3 ತಿಂಗಳ ಕಾಲ ಐಎನ್ ಎಸ್ ಚಕ್ರಾ ಯಾವುದೇ ಕಾರ್ಯಾಚರಣೆಗೆ ನೀರಿಗೆ ಇಳಿಯುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಜಲಾಂತರ್ಗಾಮಿಯ ಮೂತಿಯಾಕಾರದಲ್ಲಿರುವ ಭಾಗದಲ್ಲಿ ಈ ಸೋನಾರ್ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ಇದು ಸಮುದ್ರದಲ್ಲಿ ಮೂಡುವ ಚಲನವಲನಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಶಬ್ದಗಳ ಮುಖಾಂತರ ನೌಕೆಯ ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ.
ಐಎನ್ ಎಸ್ ಚಕ್ರಾ ರಷ್ಯಾ ನಿರ್ಮಿತ ಜಲಾಂತರ್ಗಾಮಿ ನೌಕೆಯಾಗಿದ್ದು, ಭಾರತವು ಅದನ್ನು 2012ರಲ್ಲಿ ಅಂದಾಜು 700 ಮಿಲಿಯನ್ ಡಾಲರ್ ಗಳಿಗೆ ಹತ್ತು ವರ್ಷಗಳ ಅವಧಿಗೆ ರಷ್ಯಾದಿಂದ ಲೀಸ್ ಆಧಾರದಲ್ಲಿ ಪಡೆದುಕೊಂಡಿತ್ತು, 30 ನಾಟಿಕಲ್ ಮೈಲಿಗೂ ಅಧಿಕ ವೇಗದಲ್ಲಿ ಚಲಿಸುವ ಐಎನ್ ಎಸ್ ಚಕ್ರಾ ಸಮುದ್ರದಲ್ಲಿ 600 ಮೀಟರ್ ಆಳದವರೆಗೂ ಇಳಿಯುವ ಸಾಮರ್ಥ್ಯವನ್ನು ಹೊಂದಿದ್ದು, 80 ಸಿಬ್ಬಂದಿಗಳು ಅದನ್ನು ನಿರ್ವಹಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos