ನವದೆಹಲಿ: ಗುಜರಾತ್ ವಿಧಾನಸಭೆಯ ಎರಡನೇ ಹಂತದ ಚುನಾವಣೆಗೆ ಸ್ಪರ್ಧಿಸುತ್ತಿರುವ ಶೇಕಡಾ 21ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಶೇಕಡಾ 15ರಷ್ಟು ಬಿಜೆಪಿ ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯವರು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಹೇಳಿದೆ.
ಇಂದು ತನ್ನ ವರದಿ ಬಿಡುಗಡೆ ಮಾಡಿರುವ ಎಡಿಆರ್ ಗುಜರಾತ್ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿರುವ 851 ಮಂದಿ ಅಭ್ಯರ್ಥಿಗಳಲ್ಲಿ 822 ಅಭ್ಯರ್ಥಿಗಳ ಅಫಿಡವಿಟ್ಟನ್ನು ಪರಿಶೀಲಿಸಿದೆ.
ಪರಿಶೀಲಿಸಿದ 822 ಅಭ್ಯರ್ಥಿಗಳ ಪೈಕಿ 101 ಅಭ್ಯರ್ಥಿಗಳು ಅಂದರೆ ಶೇಕಡಾ 12ರಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 64 ಅಭ್ಯರ್ಥಿಗಳು ಅಂದರೆ ಶೇಕಡಾ 8ರಷ್ಟು ಮಂದಿ ಗಂಭೀರ ಅಪರಾಧ ಪ್ರಕರಣಗಳಾದ ಕೊಲೆ, ಹತ್ಯೆಗೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧ ಎಸಗಿದ ಅಪರಾಧಗಳ ತನಿಖೆ ಎದುರಿಸುತ್ತಿದ್ದಾರೆ ಎಂದು ಎಡಿಆರ್ ಹೇಳಿಕೆಯಲ್ಲಿ ತಿಳಿಸಿದೆ.
ಉಳಿದ 29 ಮಂದಿ ಅಭ್ಯರ್ಥಿಗಳ ಸಂಪೂರ್ಣ ಅಫಿದವಿತ್ತುಗಳು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಕಾಣಿಸದಿರುವುದರಿಂದ ಅಥವಾ ಸರಿಯಾಗಿ ಸ್ಕ್ಯಾನ್ ಆಗದಿರುವುದರಿಂದ ವಿಶ್ಲೇಷಿಸಿಲ್ಲ.
ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಗಿಳಿದಿರುವ ಪ್ರಮುಖ ಪಕ್ಷಗಳ ಪೈಕಿ ಭಾರತೀಯ ಜನತಾ ಪಾರ್ಟಿಯ 86 ಅಭ್ಯರ್ಥಿಗಳಲ್ಲಿ ಶೇಕಡಾ 13ರಷ್ಟು ಮಂದಿ, ಕಾಂಗ್ರೆಸ್ ನ 88 ಅಭ್ಯರ್ಥಿಗಳಲ್ಲಿ ಶೇಕಡಾ 18ರಷ್ಟು ಮತ್ತು ಬಹುಜನ ಸಮಾಜ ಪಕ್ಷದ 74 ಅಭ್ಯರ್ಥಿಗಳಲ್ಲಿ ಶೇಕಡಾ 2ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
ಎನ್ ಸಿಪಿಯ ಶೇಕಡಾ 11ರಷ್ಟು, ಆಪ್ ನ ಶೇಕಡಾ 14ರಷ್ಟು ಮತ್ತು 344 ಸ್ವತಂತ್ರ ಅಭ್ಯರ್ಥಿಗಳು ಕೂಡ ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರು ಎಂದು ಅಫಿದವಿತ್ತಿನಲ್ಲಿ ತಿಳಿದುಬಂದಿದೆ.