ಬನಸ್ಕಾಂತದಲ್ಲಿ ಪ್ರಧಾನಿ ಮೋದಿ ಭಾಷಣ
ಅಹ್ಮದಾಬಾದ್: ಗುಜರಾತ್ ಜನತೆ ಪ್ರವಾಹದಲ್ಲಿ ನಲುಗುತ್ತಿದ್ದರೆ ಅತ್ತ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಗುಜರಾತ್ ನ ಬನಸ್ಕಂತಾದ ಭಾಭರ್ ನಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಗುಜರಾತ್ ಜನತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸಗೊತ್ತಿದೆ. ಅಂದು ಗುಜರಾತ್ ನಲ್ಲಿ ಪ್ರವಾಹವಾಗಿದ್ದಾಗ ಬಿಜೆಪಿ ಕಾರ್ಯಕರ್ತರು ಪ್ರವಾಹದ ನಡುವೆಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಅದೇ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ರೆಸಾರ್ಟ್ ನಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ಹೇಳಿದರು.
"ನನ್ನ ಕುರ್ಚಿ ಅಥವಾ ಸ್ಥಾನಕ್ಕಾಗಿ ನಾನು ಎಂದೂ ಹೋರಾಟ ಮಾಡಿದವನಲ್ಲ..ಆದರೆ ರೈತರಿಗಾಗಿ ಜನರಿಗಾಗಿ ನಾನು ಹೋರಾಡಿದ್ದೇನೆ..ನಾನು ಗುಜರಾತ್ ಸಿಎಂ ಆದ ಬಳಿಕ ಬನಸ್ಕಾಂತ ಮತ್ತು ಪಟಾನ್ ನ ಹಲವು ರೈತರು ನನ್ನನ್ನು ಭೇಟಿ ಮಾಡಿದ್ದರು. ಈ ವೇಳೆ ನಾನು ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದೆ ಎಂದು ಹೇಳಿದರು.
ಇಂಡೋ-ಪಾಕ್ ಸಂಬಂಧಕ್ಕೆ ನಾನು ಅಡ್ಡಿ ಎಂದು ಮಣಿಶಂಕರ್ ಅಯ್ಯರ್ ಹೇಳಲು ಕಾರಣವೇನು?
ಇದೇ ವೇಳೆ ತಮ್ಮನ್ನು ನೀಚ ವ್ಯಕ್ತಿ ಎಂದು ಜರಿದಿರುವ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ಭಾರತ ಮತ್ತು ಪಾಕಿಸ್ತಾನ ಸಂಬಂಧ ಸುಧಾರಣೆಗೆ ನಾನು ಅಡ್ಡಿ ಎನ್ನಲು ಕಾರಣವೇನು? ಅಂತಹ ಅಪರಾಧವನ್ನು ನಾನೇನು ಮಾಡಿದ್ದೇನೆ ಎಂದು ಪ್ರಶ್ನಿಸಿದರು.