ಲುನಾವಾಡದಲ್ಲಿ ಪ್ರಧಾನಿ ಮೋದಿ ಭಾಷಣ
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಟೀಕೆಗಳನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದು, ನನ್ನ ಬಡ ಕುಟುಂಬವನ್ನು ಕಾಂಗ್ರೆಸ್ ನಾಯಕರು ಹೀಯಾಳಿಸಿದ್ದರು ಎಂದು ಶುಕ್ರವಾರ ಹೇಳಿದ್ದಾರೆ.
ಗುಜರಾತ್ ನ ಲುನಾವಾಡದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರ ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಉದ್ದೇಶಿಸಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಶತ್ರುವಿಗೂ ನಾವು ಅವರ ತಂದೆತಾಯಿ ಕುರಿತು ಹೀಯಾಳಿಕೆಯ ಮಾತುಗಳನ್ನಾಡುವುದಿಲ್ಲ. ಆದರೆ ಕಾಂಗ್ರೆಸ್ ನಾಯಕರು ನಮ್ಮ ತಂದೆ ತಾಯಿ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ.
ನನ್ನ ಬಡುಕುಟುಂಬ, ನನ್ನ ತಂದೆ ತಾಯಿ ಯಾರು ಕೇಳುವ ಪ್ರಶ್ನೆಗೆ ನಾನು ಈ ದೇಶವೇ ನನ್ನ ಕುಟುಂಬ, ಈ ದೇಶದ ಜನರೇ ನನ್ನ ತಂದೆತಾಯಿಗಳು ಎಂದು ಉತ್ತರಿಸುತ್ತೇನೆ. ದೇಶದ ಪ್ರತಿಭಾಗದಲ್ಲಿರುವ ಮುಸ್ಲಿಮರ ತಲೆಯನ್ನು ಕಾಂಗ್ರೆಸ್ ಪಕ್ಷ ಕೆಡಿಸಿದ್ದು, ಇಡೀ ಸಮುದಾಯದ ಹಾದಿ ತಪ್ಪಿಸುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಆದರೆ ಅದಾವ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ದೊರೆತಿದೆ ಎಂದು ತಿಳಿಯುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.